ತಿಂಗಳಲ್ಲಿ ನಾಲ್ಕು ಬಾರಿ ಡೋಪಿಂಗ್ ಪರೀಕ್ಷೆಗೆ ಒಳಪಟ್ಟ ಮೀರಾಬಾಯಿ

Update: 2017-12-13 18:24 GMT

ಹೊಸದಿಲ್ಲಿ, ಡಿ.13: ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್ ಕಿರೀಟ ಧರಿಸಿರುವ ಸೈಖೊಮ್ ಮೀರಾಬಾಯಿ ಚಾನು ಒಂದು ತಿಂಗಳಲ್ಲಿ ನಾಲ್ಕು ಬಾರಿ ಡೋಪಿಂಗ್ ಟೆಸ್ಟ್‌ಗೆ ಒಳಗಾಗಿದ್ದಾರೆ. ಭಾರತದ ಓರ್ವ ಅಥ್ಲೀಟ್‌ನ್ನು ಗುರಿ ಮಾಡಿ ಹಲವು ಬಾರಿ ಡೋಪಿಂಗ್ ಟೆಸ್ಟ್‌ಗೆ ಒಳಪಡಿಸಿದ್ದು ಇದೇ ಮೊದಲು. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಚಾನು ಭಾರತದ 22 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿದ್ದರು. ಕ್ಯಾಲಿಫೋರ್ನಿಯದಿಂದ ಸ್ವದೇಶಕ್ಕೆ ವಾಪಸಾದ ಬಳಿಕ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ(ನಾಡಾ)ಡೋಪಿಂಗ್ ನಿಯಂತ್ರಣಾಧಿಕಾರಿಗಳು(ಡಿಸಿಒ) ಚಾನು ಅವರನ್ನು ಸತತ ಪರೀಕ್ಷೆ ನಡೆಸಿದ್ದಾರೆ.

 ಕಳೆದ ರವಿವಾರ ಪಾಟಿಯಾಲದ ರಾಷ್ಟ್ರೀಯ ಶಿಬಿರದಲ್ಲಿ ಡಿಸಿಒ ತಂಡ ಮೊದಲ ಬಾರಿ ಚಾನು ಅವರ ರಕ್ತ ಹಾಗೂ ಮೂತ್ರ ಮಾದರಿಯನ್ನು ಸಂಗ್ರಹಿಸಿತ್ತು. ಮರುದಿನ ಅಂತರ್-ರೈಲ್ವೇಸ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ ಚಾನು ಅವರಿಂದ ಡಿಸಿಎ ತಂಡ ಮತ್ತೊಮ್ಮೆ ಮೂತ್ರ ಮಾದರಿಯನ್ನು ಸಂಗ್ರಹಿಸಿದೆ.

 ಚಾನು ಅವರಿಂದ ಈ ಹಿಂದೆ ಎರಡು ಬಾರಿ ಅಂತಾರಾಷ್ಟ್ರೀಯ ವೇಯ್ಟ ಲಿಫ್ಟಿಂಗ್ ಫೆಡರೇಶನ್(ಐಡಬ್ಲುಎಫ್) ರಕ್ತ ಹಾಗೂ ಮೂತ್ರದ ಮಾದರಿಯನ್ನು ಸಂಗ್ರಹಿಸಿದೆ. ವಿಶ್ವ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸಲು ಭಾರತ ಲಾಸ್ ವೇಗಸ್‌ನಲ್ಲಿದ್ದಾಗ ನ.12 ರಂದು ಮೊದಲ ಬಾರಿ ಹಾಗೂ ನ.28 ರಂದು ಚಾನು ಐತಿಹಾಸಿಕ ಚಿನ್ನದ ಪದಕ ಜಯಿಸಿದ ಸಂದರ್ಭದಲ್ಲಿ ಎರಡನೇ ಬಾರಿ ಚಾನು ಅವರ ಮೂತ್ರ ಹಾಗೂ ರಕ್ತದ ಮಾದರಿಯನ್ನು ಐಡಬ್ಲುಎಫ್ ಸಂಗ್ರಹಿಸಿದೆ.

‘‘ಭಾರತದ ಕ್ರೀಡಾ ಇತಿಹಾಸದಲ್ಲಿ ಅಥ್ಲೀಟ್ 24 ಗಂಟೆಯಲ್ಲಿ ಸತತ ವಾಗಿ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದು ಇದೇ ಮೊದಲು. ಇಂತಹ ಪ್ರಕ್ರಿಯೆಯು ಅಥ್ಲೀಟ್‌ನ್ನು ಸಂಶಯದಿಂದ ನೋಡುವಂತೆ ಮಾಡುತ್ತದೆ. ಒಂದು ತಿಂಗಳಲ್ಲಿ ನಾಲ್ಕು ಬಾರಿ ಚಾನು ಅವರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಿದ್ದು ಸರಿಯಲ್ಲ’’ ಎಂದು ಭಾರತದ ವೇಟ್‌ಲಿಫ್ಟಿಂಗ್ ಫೆಡರೇಶನ್‌ನ ಕಾರ್ಯದರ್ಶಿ ಸಹದೇವ್ ಯಾದವ್ ಹೇಳಿದ್ದಾರೆ.

    ಉದ್ದೀಪನಾ ಮದ್ದು ಸೇವಿಸಿದ ಶಂಕೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಐಡಬ್ಲ್ಯುಎಫ್ ಹಾಗೂ ನಾಡಾ ಸಂಸ್ಥೆಗಳು ಚಾನು ಅವರನ್ನು 33 ಬಾರಿ ಡೋಪಿಂಗ್ ಪರೀಕ್ಷೆಗೆ ಒಳಪಡಿಸಿದೆ ಎಂದು ಆಘಾತಕಾರಿ ವಿಷಯ ಹಂಚಿಕೊಂಡಿರುವ ಯಾದವ್, ಆದರೆ ಪ್ರತಿಬಾರಿಯೂ ಚಾನು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಎಲ್ಲರಿಗೂ ಸತ್ಯ ಗೊತ್ತಾಗಿದೆ. ಆದಾಗ್ಯೂ ಅವರನ್ನು ಮಾತ್ರ ಐಡಬ್ಲ್ಯುಎಫ್ ಹಾಗೂ ನಾಡಾ ಏಕೆ ಗುರಿ ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ’’ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News