ರಾತ್ರಿ 9 ಗಂಟೆಯ ಬಳಿಕ ಎಟಿಎಂಗಳಿಗೆ ಹಣ ತುಂಬುವುದಕ್ಕೆ ನಿಷೇಧ: ಸರಕಾರದ ಚಿಂತನೆ

Update: 2017-12-14 16:13 GMT

ಹೊಸದಿಲ್ಲಿ,ಡಿ.14: ನಗದು ಹಣವನ್ನು ಸಾಗಿಸುವ ವಾಹನಗಳ ಮೇಲೆ ದಾಳಿ ಘಟನೆಗಳ ಕುರಿತು ಕಳವಳಗೊಂಡಿರುವ ಸರಕಾರವು ನಗರ ಪ್ರದೇಶಗಳಲ್ಲಿ ಎಟಿಎಂಗಳಿಗೆ ರಾತ್ರಿ 9 ಗಂಟೆಯ ನಂತರ ಹಣವನ್ನು ಭರ್ತಿ ಮಾಡಬಾರದು ಮತ್ತು ಖಾಸಗಿ ನಗದು ಸಾಗಾಟ ಏಜೆನ್ಸಿಗಳು ದಿನದ ಪೂರ್ವಾರ್ಧದಲ್ಲಿಯೇ ಬ್ಯಾಂಕುಗಳಿಂದ ಹಣವನ್ನು ಪಡೆದುಕೊಳ್ಳಬೇಕು ಎಂದು ಪ್ರಸ್ತಾಪಿಸಿದೆ.

 ನೂತನ ಪ್ರಸ್ತಾಪದಂತೆ ಎಟಿಎಂ ಯಂತ್ರಗಳಲ್ಲಿ ಹಣವನ್ನು ತುಂಬಲು ಗಡುವು ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಆರು ಗಂಟೆ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂಜೆ ನಾಲ್ಕು ಗಂಟೆಯಾಗಿರಲಿದೆ. ಅಲ್ಲದೆ ಸಿಸಿಟಿವಿ ಮತ್ತು ಜಿಪಿಎಸ್ ಅಳವಡಿಸಲಾದ, ವಿಶೇಷವಾಗಿ ವಿನ್ಯಾಸಗೊಂಡ ನಗದು ವ್ಯಾನ್‌ಗಳು ಪ್ರತಿ ಟ್ರಿಪ್‌ಗೆ ಐದು ಕೋ.ರೂ.ಗಿಂತ ಹೆಚ್ಚು ಹಣವನ್ನು ಸಾಗಿಸುವಂತಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.

ದಾಳಿಯ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಮತ್ತು ಸುರಕ್ಷಿತ ಸ್ಥಳಕ್ಕೆ ವಾಹನವನ್ನು ಕೊಂಡೊಯ್ಯಲು ಪ್ರತಿ ವ್ಯಾನಿನ ಚಾಲಕ ಮತ್ತು ಇಬ್ಬರು ಸಶಸ್ತ್ರ ಕಾವಲುಗಾರರಿಗೆ ತರಬೇತಿಯನ್ನು ನೀಡಿರಬೇಕು ಎಂದು ಗೃಹಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.

ಇವು ಎಟಿಎಂ ಯಂತ್ರಗಳಿಗೆ ಹಣವನ್ನು ತುಂಬುವ ಖಾಸಗಿ ಭದ್ರತಾ ಸಂಸ್ಥೆಗಳಿಗಾಗಿ ಗೃಹ ಸಚಿವಾಲಯವು ಪ್ರಸ್ತಾಪಿಸಿರುವ ನೂತನ ಕಡ್ಡಾಯ ಕಾರ್ಯಾಚರಣೆ ಮಾರ್ಗಸೂಚಿಗಳ ಭಾಗವಾಗಿವೆ. ಪ್ರತಿದಿನ ದೇಶಾದ್ಯಂತ ಸುಮಾರು 8,000 ಖಾಸಗಿ ವ್ಯಾನ್ ಗಳು ಸುಮಾರು 15,000 ಕೋ.ರೂ.ಗಳನ್ನು ಬ್ಯಾಂಕುಗಳು, ಕರೆನ್ಸಿ ಚೆಸ್ಟ್‌ಗಳು ಮತ್ತು ಎಟಿಎಂಗಳ ನಡುವೆ ಸಾಗಿಸುತ್ತಿವೆ. ಇದರ ಜೊತೆಗೆ ಬ್ಯಾಂಕುಗಳಿಗೆ ಸೇರಿದ ಹೆಚ್ಚುವರಿ 5,000 ಕೋ.ರೂ.ಗಳು ರಾತ್ರಿ ವೇಳೆ ಖಾಸಗಿ ಭದ್ರತಾ ಸಂಸ್ಥೆಗಳ ಬಳಿ ಇರುತ್ತವೆ.

ಲೂಟಿಕೋರರಿಗೆ ಸುಲಭದ ಗುರಿಗಳಾಗಿರುವ ನಗದು ವ್ಯಾನ್‌ಗಳ ಮೇಲೆ ಸರಣಿ ದಾಳಿಗಳ ನಂತರ ಈ ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.

ವಿವರವಾದ ಪರಿಶೀಲನೆಗಾಗಿ ಈ ಮಾರ್ಗಸೂಚಿಗಳನ್ನು ಕಾನೂನು ಸಚಿವಾಲಯಕ್ಕೆ ಕಳಹಿಸಲಾಗಿದ್ದು,ಅಂಗೀಕೃತಗೊಂಡ ಬಳಿಕ ಅನುಷ್ಠಾನದ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ಒಪ್ಪಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News