ಅಪಘಾತದಲ್ಲಿ ಬೇರ್ಪಟ್ಟ ಪುಟಾಣಿಯ 2 ಕಾಲುಗಳ ಮರು ಜೋಡಣೆ ಮಾಡಿದ ಎ.ಜೆ. ಆಸ್ಪತ್ರೆ!

Update: 2017-12-15 10:16 GMT

ಮಂಗಳೂರು, ಡಿ.15: ರೈಲು ಅಪಘಾತದಲ್ಲಿ ತನ್ನೆರಡೂ ಕಾಲುಗಳು ಸಂಪೂರ್ಣವಾಗಿ ಬೇರ್ಪಟ್ಟ ಎರಡು ವರ್ಷ ಹರೆಯದ ಪುಟಾಣಿಯ ಕಾಲುಗಳನ್ನು ಯಶಸ್ವಿಯಾಗಿ ಮರು ಜೋಡಣೆಗೊಳಿಸಿ ಪುಟಾಣಿಯ ಹೊಸ ಹೆಜ್ಜೆಗಳಿಗೆ ಎ.ಜೆ. ಆಸ್ಪತ್ರೆಯ ವೈದ್ಯರು ಕಾರಣರಾಗಿದ್ದಾರೆ. ವಿಶ್ವದಲ್ಲೇ ಅತ್ಯಂತ ಅಪರೂಪ ಹಾಗೂ ಭಾರತದಲ್ಲಿ ಇದೇ ಪ್ರಥಮ ಯಶಸ್ವಿ ಶಸ್ತ್ರಚಿಕಿತ್ಸೆ ಎಂಬ ಹೆಗ್ಗಳಿಕೆಗೂ ಇದೀಗ ಎ.ಜೆ. ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ದಿನೇಶ್ ಕದಂ ಹಾಗೂ ತಂಡ ಪಾತ್ರವಾಗಿದೆ.

ಜಗತ್ತಿನಲ್ಲಿ ಇದುವರೆಗೆ 13 ಜನರಿಗೆ ಮಾತ್ರವೇ ಈ ರೀತಿ ಎರಡೂ ಕಾಲುಗಳ ಮರು ಜೋಡಣೆಯ ಮೈಕ್ರೋ ವ್ಯಾಸ್ಕುಲರ್ ಚಿಕಿತ್ಸೆ ನಡೆಸಲಾಗಿದ್ದು, ಅದರಲ್ಲೂ ಅತೀ ಕಿರಿಯ ವಯಸ್ಸಿನ ಈ ಪುಟಾಣಿಯ ಪ್ರಕರಣದಲ್ಲಿ ಮೊಣಕಾಲಿನ ಮೇಲ್ಭಾಗದಿಂದ ಕತ್ತರಿಸಲ್ಪಟ್ಟ ಕಾಲನ್ನು ಯಶಸ್ವಿಯಾಗಿ ಮರು ಜೋಡಿಸಿರುವ ಪ್ರಕರಣ ಇದೇ ಮೊದಲನೆಯದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಎ.ಜೆ. ಆಸ್ಪತ್ರೆಯಲ್ಲಿ ಕಳೆದ 14 ವರ್ಷಗಳಲ್ಲಿ ಸಾವಿರಕ್ಕೂ ಅಧಿಕ ಮೈಕ್ರೋ ವ್ಯಾಸ್ಕುಲರ್ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆ ನಡೆಸಲಾಗಿದೆ ಎಂದವರು ಹೇಳಿದರು. ಅಪಘಾತದ ಘಟನೆ ಹಾಗೂ ಶಸ್ತ್ರಚಿಕಿತ್ಸೆ ಕುರಿತಂತೆ ಮಾಹಿತಿ ನೀಡಿದ ವೈದ್ಯ ಡಾ.ದಿನೇಶ್ ಕದಂ, ಎಪ್ರಿಲ್ 29ರಂದು ಬೆಳಗಿನ ವೇಳೆ ಕೇರಳದ ಪಯ್ಯನ್ನೂರಿನ ಎರಡು ವರ್ಷದ ಮಗು ತಾಯಿಯ ಮಡಿಲಿನಲ್ಲಿದ್ದ ಸಂದರ್ಭ ರೈಲು ಹಳಿಯ ಅಪಘಾತ ಸಂಭವಿಸಿತು. ಈ ಅಪಘಾತದಲ್ಲಿ ತಾಯಿ ಮೃತಪಟ್ಟು, ರೈಲು ಹಳಿಗೆ ಬಿದ್ದ ಮಗುವಿನ ಎರಡೂ ಕಾಲುಗಳು (ಬಲಕಾಲು ಮೊಣಕಾಲಿನ ಮೇಲ್ಭಾಗದಿಂದ ಹಾಗೂ ಎಡಕಾಲು ಮೊಣಕಾಲಿನ ಕೆಳಭಾಗದಿಂದ ಕತ್ತರಿಸಲ್ಪಟ್ಟಿದ್ದವು.

ರೈಲಿನ ಹಳಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಸಾರ್ವಜನಿಕರು ಸ್ಥಳೀಯ ರೈಲ್ವೇ ಪೊಲೀಸರ ನೆರವಿನೊಂದಿಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ಬೇರ್ಪಟ್ಟ ಎರಡೂ ಕಾಲುಗಳನ್ನು ಥರ್ಮಾಕೋಲ್ ಬಾಕ್ಸ್‌ನಲ್ಲಿ ಶೀತಲ ವಾತಾವರಣದಲ್ಲಿರಿಸಿ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದರು. ಮಧ್ಯಾಹ್ನದ ವೇಳೆಗೆ ಆಸ್ಪತ್ರೆಗೆ ದಾಖಲಾದ ಮಗುವಿನ ಸಂಬಂಧಿಕರ ಬಗ್ಗೆ ಮಾಹಿತಿ ಇಲ್ಲವಾಗಿದ್ದರೂ ರೈಲ್ವೇ ಪೊಲೀಸ್ ಇಲಾಖೆಯ ಅನುಮತಿಯೊಂದಿಗೆ ಚಿಕಿತ್ಸೆ ಒದಗಿಸಲು ನಿರ್ಧರಿಸಲಾಯಿತು. ಅತ್ಯಂತ ಸರಳ ಹಾಗೂ ಕ್ಲಿಷ್ಟಕರವಾದ ಮೈಕ್ರೋ ವ್ಯಾಸ್ಕುಲರ್ ಪ್ಲಾಸ್ಟಿಕ್ ಸರ್ಜರಿ ಶಸ್ತ್ರ ಚಿಕಿತ್ಸೆಯ ಮೂಲಕ ಮಗುವಿನ ಕಾಲುಗಳನ್ನು ಜೋಡಿಸಲು ನಿರ್ಧರಿಸಲಾಯಿತು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮಗುವಿನ ಸಂಪೂರ್ಣ ಜವಾಬ್ದಾರಿ ವಹಿಸಿ ವೈದ್ಯ ತಂಡಕ್ಕೆ ಪ್ರೋತ್ಸಾಹ ನೀಡಿದ ಪರಿಣಾಮ ಏಳು ಗಂಟೆಗಳ ಸತತ ಶಸ್ತ್ರಚಿಕಿತ್ಸೆಯಲ್ಲಿ ಮಗುವಿಗೆ ಹೊಸ ಜೀವನವನ್ನು ಒದಗಿಸಲು ಸಾಧ್ಯವಾಯಿತು ಎಂದವರು ವಿವರ ನೀಡಿದರು. ಚಿಕಿತ್ಸೆಯಲ್ಲಿ ತಮ್ಮ ಜತೆ ಡಾ.ಸನತ್ ಭಂಡಾರಿ, ಡಾ.ತ್ರೀ ವಿಕ್ರಂ ತಂತ್ರಿ, ಡಾ. ಮಿಥುನ ಶೆಟ್ಟಿ, ಡಾ. ಗೌತಮ ಶೆಟ್ಟಿ ಸಹಕರಿಸಿದ್ದಾರೆ ಎಂದು ಅವರು ಹೇಳಿದರು. ಶಸ್ತ್ರಚಿಕಿತ್ಸೆ ಬಳಿಕ ಮಗುವಿನ ತಂದೆ ಹಾಗೂ ಸಂಬಂಧಿಕರ ಸಂಪರ್ಕವನ್ನು ಪಡೆದು ಅವರ ಸಹಕಾರ ಪಡೆಯಲಾಯಿತು. ಇದೀಗ ಮಗು ನಡೆದಾಡುತ್ತಿದ್ದು, ರಕ್ತದೊತ್ತಡ, ಸೋಂಕು ಮೊದಲಾದವುಗಳ ಕುರಿತಂತೆ ನಿಗಾ ವಹಿಸಲಾಗುತ್ತಿದೆ.

ಆರು ತಿಂಗಳ ಅವಧಿಯಲ್ಲಿ ವಿಶೇಷ ಆರೈಕೆ, ಗಾಯಗಳ ಚರ್ಮ ಕಸಿ ಚಿಕಿತ್ಸೆ, ಫಿಸಿಯೋಥೆರಪಿ, ಚಿಕಿತ್ಸೆಯನ್ನೂ ಮಗುವಿಗೆ ನೀಡಲಾಗಿದೆ. ಮಗುವಿನ ಕಾಲುಗಳ ಎಲುಬುಗಳು ಸಂಪೂರ್ಣವಾಗಿ ಜೋಡಣೆಯಾಗಿದ್ದು, ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲು ಕಾಲುಗಳಿಗೆ ಹಾಕಲಾಗಿದ್ದ ಇಂಪ್ಲಾಟ್‌ಗಳನ್ನು ಕೂಡಾ ತೆಗೆಯಲಾಗಿದೆ ಎಂದು ಡಾ. ದಿನೇಶ್ ಕದಂ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ತ್ರೀ ವಿಕ್ರಂ ತಂತ್ರಿ, ಶಿವಪ್ರಸಾದ್, ಡಾ. ಸನತ್ ಭಂಡಾರಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News