ಸ್ಮಾರ್ಟ್‌ಫೋನ್ ಸೇರಿದಂತೆ ಕೆಲವು ಸಾಮಗ್ರಿಗಳ ಆಮದು ಸುಂಕ ಏರಿಕೆ

Update: 2017-12-15 15:53 GMT

ಹೊಸದಿಲ್ಲಿ,ಡಿ.15: ದೇಶಿಯ ತಯಾರಕರನ್ನು ರಕ್ಷಿಸುವ ಪ್ರಯತ್ನವಾಗಿ ಸರಕಾರವು ಶುಕ್ರವಾರ ಸ್ಮಾರ್ಟ್‌ಫೋನ್, ಟಿವಿ ಸೆಟ್, ಮೈಕ್ರೋವೇವ್, ಎಲ್‌ಇಡಿ ಲ್ಯಾಂಪ್ ಮತ್ತು ಇತರ ಕೆಲವು ವಿದ್ಯುನ್ಮಾನ ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ.

ಆಮದು ಸ್ಮಾರ್ಟ್‌ಫೋನ್‌ಗಳ ಮೇಲಿನ ಸುಂಕವನ್ನು ಶೂನ್ಯದಿಂದ ಶೇ.15ಕ್ಕೆ ಹೆಚ್ಚಿಸಲಾಗಿದ್ದು, ಇನ್ನು ಮುಂದೆ ಅವು ದುಬಾರಿಯಾಗಲಿವೆ.

ಸರಕಾರದ ಈ ಕ್ರಮವು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಗ್ರಾಹಕರಿಗೆ ಗುಚ್ಛ ಸೇವೆಗಳನ್ನೊದಗಿಸಲು ಅಗ್ಗದ ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಟೆಲಿಕಾಮ್ ಕಂಪನಿಗಳಿಗೆ ಹೊಡೆತ ನೀಡಲಿದೆ.

ಟಿವಿ ಸೆಟ್ ಮತ್ತು ಮೈಕ್ರೋವೇವ್‌ಗಳ ಮೇಲಿನ ಆಮದು ಸುಂಕವನ್ನು ಶೇ.20ಕ್ಕೆ ದುಪ್ಪಟ್ಟುಗೊಳಿಸಲಾಗಿದ್ದು, ಎಲ್‌ಇಡಿ ದೀಪಗಳಿಗೆ ಇನ್ನು ಮುಂದೆ ಶೇ. 20ರಷ್ಟು ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ವಿತ್ತ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.

ವೀಡಿಯೊ ರೆಕಾರ್ಡಿಂಗ್ ಉಪಕರಣಗಳು ಮತ್ತು ಟಿವಿ ಕ್ಯಾಮೆರಾಗಳ ಮೇಲಿನ ಆಮದು ಸುಂಕವನ್ನು ಈಗಿನ ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಲಾಗಿದೆ. ಸೆಟ್ ಟಾಪ್ ಬಾಕ್ಸ್‌ಗಳಿಗೆ ಸುಂಕವನ್ನು ಶೇ.10ರಿಂದ ಶೇ.20ಕ್ಕೆ ಏರಿಸಲಾಗಿದೆ.

ಸರ್ಚ್‌ಲೈಟ್‌ಗಳು ಮತ್ತು ಶ್ಯಾಂಡೆಲಿಯರ್‌ಗಳು ಸೇರಿದಂತೆ ದೀಪಗಳು ಮತ್ತು ಲೈಟಿಂಗ್ ಫಿಟಿಂಗ್‌ಗಳಿಗೆ ಆಮದು ಸುಂಕ ಈಗಿನ ಶೇ.10ರಿಂದ ಶೇ.20ಕ್ಕೆ ಮತ್ತು ವಿದ್ಯುತ್ ಮೀಟರ್‌ಗಳ ಮೇಲಿನ ಸುಂಕ ಶೇ.10ರಿಂದ ಶೇ.15ಕ್ಕೆ ಏರಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News