ಗಂಗಾ ನದಿ ದಡದ ನಗರಗಳಲ್ಲಿ ಪ್ಲಾಸ್ಟಿಕ್ ನಿಷೇಧ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶ
ಹೊಸದಿಲ್ಲಿ, ಡಿ. 15: ಗಂಗಾ ನದಿ ದಂಡೆಯಲ್ಲಿ ಇರುವ ಹರಿದ್ವಾರ ಹಾಗೂ ಋಷಿಕೇಶದಂತಹ ನಗರಗಳಲ್ಲಿ ಕ್ಯಾರಿ ಬ್ಯಾಗ್, ಪ್ಲೇಟ್‌ನಂತಹ ಪ್ಲಾಸ್ಟಿಕ್ ವಸ್ತುಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸಂಪೂರ್ಣ ನಿಷೇಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತರ್ ಕುಮಾರ್ ನೇತೃತ್ವದ ಪೀಠ ಉತ್ತರಕಾಶಿ ವರೆಗೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ದಾಸ್ತಾನು ಹಾಗೂ ಮಾರಾಟ ನಿಷೇಧಿಸಿದೆ.
ಆದೇಶ ಉಲ್ಲಂಘಿಸಿದವರ ವಿರುದ್ಧ 5 ಸಾವಿರ ರೂ. ದಂಡ ವಿಧಿಸಲಾಗುವುದು ಹಾಗೂ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೇಳಿದೆ. ಈ ಹಿಂದಿನ ಆದೇಶದ ಹೊರತಾಗಿಯೂ ಈ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿರುವುದರಿಂದ ನದಿ ನೀರು ಮಾಲಿನ್ಯಗೊಂಡ ಬಳಿಕ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಈ ನಿರ್ದೇಶನ ನೀಡಿದೆ.
ಪರಿಸರವಾದಿ ಎಂ.ಸಿ. ಮೆಹ್ತಾ ಅವರ ಮನವಿ ಆಲಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಈ ಆದೇಶ ನೀಡಿತು.