×
Ad

ಆರೋಪಿಯನ್ನು ಬೆಂಬಲಿಸಿದ 100ಕ್ಕೂ ಅಧಿಕ ಮಂದಿಯ ಬಂಧನ

Update: 2017-12-15 22:36 IST

ಜೈಪುರ, ಡಿ.15: ಲವ್‌ಜಿಹಾದ್ ನಡೆಸುತ್ತಿದ್ದ ಆರೋಪದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಜೀವಂತ ದಹಿಸಿದ ಬಳಿಕ ತನ್ನ ಕೃತ್ಯವನ್ನು ವೀಡಿಯೊ ದೃಶ್ಯಾವಳಿಯ ಮೂಲಕ ಸಮರ್ಥಿಸಿಕೊಂಡಿದ್ದ ಶಂಭೂಲಾಲ್ ಎಂಬ ವ್ಯಕ್ತಿಗೆ ಬೆಂಬಲ ಸೂಚಿಸಿರುವ 100ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

 ಉದಯ್‌ಪುರ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದರೂ ಗುರುವಾರ ಹಲವು ಮಂದಿ ಬೀದಿಗಿಳಿದು ಶಂಭೂಲಾಲ್ ಪರ ಘೋಷಣೆ ಕೂಗಿ ಕಲ್ಲೆಸೆತದಲ್ಲಿ ತೊಡಗಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿ ಅವರನ್ನು ಚದುರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಅಂತರ್ಜಾಲದಲ್ಲಿ ದ್ವೇಷಪೂರಿತ ಸಂದೇಶ ಪ್ರಸಾರ ಮಾಡುತ್ತಿರುವವರನ್ನು ಪತ್ತೆಹಚ್ಚಲು ಪೊಲೀಸರು ತಂಡವೊಂದನ್ನು ರಚಿಸಿದ್ದಾರೆ.

ಇದಕ್ಕೂ ಮುನ್ನ, ಕೊಲೆ ಆರೋಪಿ ಶಂಭೂಲಾಲ್‌ನನ್ನು ಹೊಗಳಿ, ಆತನ ಕೃತ್ಯಕ್ಕೆ ಶಹಭಾಸ್ ಹೇಳುವ ಹಲವಾರು ಸಂದೇಶಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿವೆ. ರಾಜಸಮಂದ್ ಮತ್ತು ನೆರೆಯ ಚಿತ್ತೋರ್‌ಗಡ ಜಿಲ್ಲೆಯಲ್ಲಿ ಹಲವಾರು ವಾಟ್ಸ್ಆ್ಯಫ್ ಗ್ರೂಫ್‌ಗಳಲ್ಲಿ ಹರಿದಾಡುತ್ತಿರುವ ಇಂತಹ ಸಂದೇಶಗಳಲ್ಲಿ ಶಂಭೂಲಾಲ್‌ನನ್ನು 2001ರ ಪಾರ್ಲಿಮೆಂಟ್ ಮೇಲಿನ ದಾಳಿ ಪ್ರಕರಣದಲ್ಲಿ ದೋಷಿ ಎಂದು ಘೋಷಿತನಾಗಿರುವ ಅಫ್ಜಲ್ ಗುರುವಿಗೆ ಸೂಕ್ತ ಉತ್ತರ ಎಂದು ಬಣ್ಣಿಸಲಾಗಿದೆ.

‘‘ಲವ್‌ಜಿಹಾದಿಗಳೇ ಜಾಗೃತೆ, ಶಂಭೂಲಾಲ್ ಸಕ್ರಿಯನಾಗಿದ್ದಾನೆ’’ ಎಂಬ ವೀಡಿಯೊ ಪೋಸ್ಟ್‌ಗಳು ಜಿಲ್ಲೆಯಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಮೂಡಿಸಿದೆ. ತ್ವರಿತವಾಗಿ ಕಾರ್ಯಾಚರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಆನ್‌ಲೈನ್ ಮೂಲಕ ದ್ವೇಷಪೂರಿತ ಸಂದೇಶ ಸಾರುತ್ತಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸೈಬರ್‌ಕ್ರೈಂ ವಿಭಾಗವು ಈ ಬಗ್ಗೆ ಕಣ್ಣಿರಿಸಿದ್ದು ದುಷ್ಕರ್ಮಿಗಳನ್ನು ಪತ್ತೆಹಚ್ಚಲಾಗುವುದು ಎಂದು ರಾಜಸಮಂದ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News