ಚೊಚ್ಚಲ ಟಿ-10 ಕ್ರಿಕೆಟ್ ಲೀಗ್: ಅಫ್ರಿದಿ ಹ್ಯಾಟ್ರಿಕ್, ಸೆಹ್ವಾಗ್ ತಂಡಕ್ಕೆ ಸೋಲು

Update: 2017-12-15 18:10 GMT

ಶಾರ್ಜಾ, ಡಿ.15: ಮೊದಲ ಆವೃತ್ತಿಯ ಟಿ-10 ಕ್ರಿಕೆಟ್ ಲೀಗ್‌ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದರು. ಈ ಮೂಲಕ ಟೂರ್ನಿಯ ಆರಂಭದಲ್ಲೇ ಇತಿಹಾಸ ನಿರ್ಮಿಸಿದರು.

ಅಫ್ರಿದಿ ಸಾಹಸದ ಸಹಾಯದಿಂದ ಪಾಖ್‌ಟೂನ್ಸ್ ತಂಡ ಸೆಹ್ವಾಗ್ ನಾಯಕತ್ವದ ಮರಾಥಾ ಅರೇಬಿಯನ್ಸ್ ತಂಡವನ್ನು 25 ರನ್‌ಗಳ ಅಂತರದಿಂದ ಸೋಲಿಸಿತು.

ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಕೇರಳ ಕಿಂಗ್ಸ್ ತಂಡ ಐರ್ಲೆಂಡ್‌ನ ಪಾಲ್ ಸ್ಟರ್ಲಿಂಗ್ ಅರ್ಧಶತಕ(ಔಟಾಗದೆ 66) ನೆರವಿನಿಂದ ಬಂಗಾಳ ಟೈಗರ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿತು.

122 ರನ್ ಬೆನ್ನಟ್ಟಿದ ಅರೇಬಿಯನ್ ತಂಡಕ್ಕೆ ಅಫ್ರಿದಿ ಆರಂಭದಲ್ಲೇ ಆಘಾತ ನೀಡಿದರು. ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅಫ್ರಿದಿ ಅರೇಬಿಯನ್ಸ್ ತಂಡದ ಬೆನ್ನುಮೂಳೆ ಮುರಿದರು. ಅಫ್ರಿದಿಯ ಮೊದಲ ಎಸೆತಕ್ಕೆ ದಕ್ಷಿಣ ಆಫ್ರಿಕದ ರಿಲೀ ರೊಸ್ಸೊ, ಎರಡನೇ ಎಸೆತಕ್ಕೆ ವೆಸ್ಟ್‌ಇಂಡೀಸ್‌ನ ಡ್ವೇಯ್ನ್ ಬ್ರಾವೊ ಹಾಗೂ ಮೂರನೇ ಎಸೆತಕ್ಕೆ ಸೆಹ್ವಾಗ್ ವಿಕೆಟ್ ಉರುಳಿತು.

ಅರೇಬಿಯನ್ ತಂಡದ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ (ಅಜೇಯ 57, 26 ಎಸೆತ) ಏಕಾಂಗಿ ಹೋರಾಟದ ಹೊರತಾಗಿಯೂ 10 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 96 ರನ್ ಗಳಿಸಿತು. ಬ್ರಿಸ್ಟೋಲ್‌ನ ನೈಟ್‌ಕ್ಲಬ್ ಘಟನೆಯ ಬಳಿಕ ಹೇಲ್ಸ್ ಆಡಿದ ಮೊದಲ ಪಂದ್ಯ ಇದಾಗಿದೆ. ಆ ಘಟನೆಯ ನಂತರ ಹೇಲ್ಸ್ ಹಾಗೂ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದಿಂದ ಅಮಾನತುಗೊಂಡಿದ್ದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಖ್‌ಟೂನ್ಸ್ ತಂಡ 10 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಿತ್ತು. ಫಖರ್ ಝಮಾನ್(45) ಹಾಗೂ ಲಿಯಾಮ್ ಡಾಸನ್(44)80 ರನ್ ಜೊತೆಯಾಟ ನಡೆಸಿದರು. ಇಮಾದ್ ವಾಸಿಂ ಎರಡು ವಿಕೆಟ್‌ಗಳನ್ನು ಉರುಳಿಸಿದರು.

  10 ಓವರ್‌ಗಳ ಚುಟುಕು ಪಂದ್ಯವಾಗಿದ್ದರೂ 14,500 ಪ್ರೇಕ್ಷಕರ ಸಾಮರ್ಥ್ಯದ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಅಫ್ರಿದಿ ಹಾಗೂ ಸೆಹ್ವಾಗ್ ಆಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕ್ರಿಕೆಟ್ ಅಭಿಮಾನಿಗಳು ‘10 ಅಫ್ರಿದಿ’ ಎಂದು ಬರೆದಿದ್ದ ಜರ್ಸಿಯನ್ನು ಧರಿಸಿಕೊಂಡಿದ್ದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News