ಹ್ಯಾಟ್ರಿಕ್ ಗೆಲುವಿನೊಂದಿಗೆ ಸಿಂಧು ಸೆಮಿಫೈನಲ್ಗೆ ಲಗ್ಗೆ

Update: 2017-12-15 18:15 GMT

ದುಬೈ, ಡಿ.15: ದುಬೈ ವರ್ಲ್ಡ್ ಸೂಪರ್ ಸರಣಿ ಫೈನಲ್ಸ್ ಟೂರ್ನಿಯಲ್ಲಿ ಮೂರನೇ ಹಾಗೂ ಕೊನೆಯ ಲೀಗ್ ಪಂದ್ಯವನ್ನು ನೇರ ಗೇಮ್‌ಗಳಿಂದ ಜಯಿಸಿರುವ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅಜೇಯವಾಗಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ತನ್ನ 3ನೇ ಪಂದ್ಯದಲ್ಲಿ ಸಿಂಧು ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಕೇವಲ 36 ನಿಮಿಷಗಳ ಹೋರಾಟದಲ್ಲಿ 21-9, 21-13 ಗೇಮ್‌ಗಳ ಅಂತರದಿಂದ ಮಣಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು.

ಈ ವರ್ಷ ಎರಡು ಸೂಪರ್ ಸರಣಿ ಜಯಿಸಿರುವ ವಿಶ್ವದ ನಂ.3ನೇ ಆಟಗಾರ್ತಿ ಸಿಂದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಚೀನಾದ ಚೆನ್ ಯುಫಿ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಬಿ ಗುಂಪಿನ ಪಂದ್ಯದಲ್ಲಿ ಚೆನ್ ಥಾಯ್ಲೆಂಡ್‌ನ ರಚನೊಕ್ ಇಂತನಾನ್‌ರನ್ನು 21-18, 13-21, 21-18 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

  22ರ ಹರೆಯದ ಸಿಂಧು ಅವರು ಯಮಗುಚಿ ವಿರುದ್ಧ ಪಂದ್ಯದ ಆರಂಭದಲ್ಲೇ 5-0 ಮುನ್ನಡೆ ಸಾಧಿಸಿ ಮೇಲುಗೈ ಸಾಧಿಸಿದರು. ಎರಡನೇ ಗೇಮ್‌ನ ಆರಂಭದಲ್ಲಿ ಯಮಗುಚಿ ತಿರುಗೇಟು ನೀಡಲು ಯತ್ನಿಸಿದರು. ಆದರೆ ಸಿಂಧು 10 ಅಂಕ ದಾಟಿದ ಬಳಿಕ ಯಮಗುಚಿ ಅಸಹಾಯಕರಾದರು. ಸಿಂಧು ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿದರು.

  ಈ ಪಂದ್ಯಕ್ಕಿಂತ ಮೊದಲು ಸಿಂಧು ಅವರು ಯಮಗುಚಿ ವಿರುದ್ಧ 4-2 ಹೆಡ್-ಟು-ಹೆಡ್ ಗೆಲುವು-ಸೋಲಿನ ದಾಖಲೆ ಹೊಂದಿದ್ದರು. ಇದರಲ್ಲಿ ಕಳೆದ ತಿಂಗಳ ಹಾಂಕಾಂಗ್ ಓಪನ್ ಸರಣಿ ಗೆಲುವು ಸೇರಿದೆ.

 ಸಿಂಧು ಗ್ರೂಪ್ ಹಂತದ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಚೀನಾದ ಹೀ ಬಿಂಗ್‌ಜಾವೊ ವಿರುದ್ಧದ ಮೊದಲ ಪಂದ್ಯದಲ್ಲಿ 21-11, 16-21, 21-18 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದರು.

ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಜಪಾನ್‌ನ ಸಯಾಕಾ ಸಾಟೊ ಅವರನ್ನು 21-13, 21-12 ಅಂತರದಿಂದ ಸೋಲಿಸಿ ಸತತ ಎರಡನೇ ಗೆಲುವು ದಾಖಲಿಸಿದ್ದರು.

ಶ್ರೀಕಾಂತ್‌ಗೆ ಸತತ 3ನೇ ಸೋಲು: ಶ್ರೀಕಾಂತ್ ಪುರುಷರ ಸಿಂಗಲ್ಸ್ ವಿಭಾಗದ ‘ಬಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಚೀನಾದ ಆಲ್ ಇಂಗ್ಲೆಂಡ್ ಫೈನಲಿಸ್ಟ್ ಶಿ ಯೂಖಿ ವಿರುದ್ಧ 17-21,21-19, 14-21 ಅಂತರದಿಂದ ಸೋತಿದ್ದಾರೆ.

ಸತತ 3 ಪಂದ್ಯಗಳನ್ನು ಸೋತಿರುವ ಕೆ.ಶ್ರೀಕಾಂತ್ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದಾರೆ. ಚೀನಾದ ಯೂಖಿ ಅಜೇಯ ಗೆಲುವಿನ ದಾಖಲೆಯೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶ್ರೀಕಾಂತ್ ತನ್ನ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸನ್ ವಿರುದ್ದ 13-21, 17-21 ಗೇಮ್‌ಗಳ ಅಂತರದಿಂದ ಸೋತಿದ್ದರು. ಎರಡನೇ ಪಂದ್ಯದಲ್ಲಿ ಚೌ ಟಿಯೆನ್ ಚೆನ್ ವಿರುದ್ಧ 18-21, 18-21 ಗೇಮ್‌ಗಳಿಂದ ಸೋತಿದ್ದು ಸೆಮಿಫೈನಲ್‌ಗೆ ತೇರ್ಗಡೆಯಾಗುವುದರಿಂದ ವಂಚಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News