ಬಹುಸಂಖ್ಯಾತ ಬಿಲ್ಲವರಿಗೆ ಪ್ರಾತಿನಿಧ್ಯ ಯಾಕಿಲ್ಲ?

Update: 2017-12-16 08:29 GMT
ರಾಜೇಂದ್ರ ಚಿಲಿಂಬಿ

►ಸಮುದಾಯದೊಳಗೆ ವ್ಯಾಪಕ ಅಸಮಾಧಾನ 

►ಕರಾವಳಿಯಲ್ಲಿ ಬಿಲ್ಲವ ಮುಕ್ತ ಕಾಂಗ್ರೆಸ್ ನಿರ್ಮಿಸಲಾಗುತ್ತಿದೆಯೇ? ಸಮುದಾಯದ ಪ್ರಶ್ನೆ

ಮಂಗಳೂರು, ಡಿ.15: ಕರಾವಳಿ ಪ್ರದೇಶದಲ್ಲಿ ಸ್ಪಷ್ಟ ಬಹುಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯಕ್ಕೆ ರಾಜ್ಯದ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಸೂಕ್ತ ಪ್ರಾತಿನಿಧ್ಯ ನೀಡದೆ ಅನ್ಯಾಯ ಮಾಡಿದೆ ಎಂಬ ಅಸಮಾಧಾನದ ಮಾತು ಆ ಸಮುದಾಯದೊಳಗೆ ವ್ಯಾಪಕವಾಗಿ ಕೇಳಿಬರುತ್ತಿದೆ.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ರಾಜಕೀಯವಾಗಿ ನಿರ್ಣಾಯಕ ಸ್ಥಾನದಲ್ಲಿರುವ ಬಿಲ್ಲವ ಸಮುದಾಯವನ್ನು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೂ ಕಡೆಗಣಿಸಿವೆ. ಇಲ್ಲಿ ದೀರ್ಘಾವಧಿ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವಂತೂ ಬಿಲ್ಲವ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಶಾಸನ ಸಭೆಗಳಲ್ಲಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಮುದಾಯಕ್ಕೆ ದೊರಕಿಲ್ಲ ಎಂಬ ಅಸಮಾಧಾನ ಬಿಲ್ಲವ ಸಮುದಾಯದೊಳಗೆ ಹೊಗೆಯಾಡುತ್ತಿದೆ. ಕಳೆದ ಸುಮಾರು 15 ವರ್ಷಗಳಿಂದ ಈ ಬಗ್ಗೆ ಸಮುದಾಯದ ಒಳಗಿನಿಂದ ಅಸಮಾಧಾನದ ಕೂಗು ಕೇಳಿಬರುತ್ತಿದ್ದು, ಇದೀಗ ರಾಜ್ಯದಲ್ಲಿ ಮತ್ತೆ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಈ ಕೂಗು ಅಲ್ಲಲ್ಲಿ ಪ್ರತಿಧ್ವನಿಸುತ್ತಿದೆ.

ಅವಿಭಜಿತ ದ.ಕ. ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಬಿಲ್ಲವ ಮತದಾರರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಆದ್ದರಿಂದಲೇ ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪಕ್ಷದೊಳಗೆ ಬಿಲ್ಲವ ಸಮುದಾಯದ ಶಾಸಕರ ಕೊರತೆ ಇರುವುದನ್ನು ಮನಗಂಡು, ಸಮುದಾಯದ ಮತದಾರರ ಮೇಲೆ ಕಣ್ಣಿಟ್ಟು, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಎಂಎಲ್ಸಿ ಸ್ಥಾನ ನೀಡಿ ಬಳಿಕ ಅವರಿಗೆ ಮುಜರಾಯಿ ಸಚಿವರ ಹುದ್ದೆಯನ್ನೂ ನೀಡಿತ್ತು.

ಪ್ರಸಕ್ತ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಿಲ್ಲವ ಸಮುದಾಯದ ವಿನಯ ಕುಮಾರ್ ಸೊರಕೆ ಹಾಗೂ ಗೋಪಾಲ ಪೂಜಾರಿಯವರು ಉಡುಪಿ ಜಿಲ್ಲೆಯಿಂದ ಕಾಂಗ್ರೆಸ್‌ಎಂಎಲ್‌ಎಗಳಾಗಿ ಆಯ್ಕೆಯಾಗಿದ್ದರು. ಬೆಳ್ತಂಗಡಿಯಲ್ಲಿ ಹಿರಿಯ ನಾಯಕ ವಸಂತ ಬಂಗೇರ ಗೆದ್ದಿದ್ದರು. ಸೊರಕೆ ಅವರಿಗೆ ನಗರಾಭಿವೃದ್ಧಿ ಸಚಿವ ಸ್ಥಾನವನ್ನು ನೀಡಲಾಯಿತಾದರೂ ಒಂದೂವರೆ ವರ್ಷದ ಹಿಂದೆ ಅದನ್ನು ಹಿಂಪಡೆಯಲಾಯಿತು. ಆ ಸಂದರ್ಭದಲ್ಲಿ ಗೋಪಾಲ ಪೂಜಾರಿ ಅಥವಾ ವಸಂತ ಬಂಗೇರ ಅವರನ್ನು ಅವಿಭಜಿತ ದ.ಕ. ಜಿಲ್ಲೆಯಿಂದ ಸಚಿವರಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಆಶಯ ಸಮುದಾಯದಲ್ಲಿ ಹುಟ್ಟಿಕೊಂಡಿತ್ತಾದರೂ ಅದು ಈಡೇರಲಿಲ್ಲ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ, ರಾಜ್ಯದಲ್ಲಿ ಬಿಲ್ಲವ ಮುಕ್ತ ಕಾಂಗ್ರೆಸ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

ಮೇಲ್ವರ್ಗದವರ ಅಧಿಕಾರ ಕಾಯುವ ಕಾಲಾಳುಗಳಾಗುತ್ತಿದ್ದೇವೆ!
ಧಾರ್ಮಿಕತೆಯ ಮೂಲಕ ನಮ್ಮನ್ನು ನಿಯಂತ್ರಣ ಮಾಡುವ ಪ್ರಯತ್ನ ನಡೆಯುತ್ತಿದೆ. ಇತರ ಕಡೆಗಳಂತೆ ರಾಜಕೀಯದಲ್ಲಿ ಬಸವಣ್ಣ, ಬುದ್ಧರಂತಹವರನ್ನು ಓದಿಕೊಂಡು ರಾಜಕೀಯಕ್ಕೆ ಬಂದವರು ಕಡಿಮೆ. ಅದರಿಂದಾಗಿ ಬಿಲ್ಲವ ಸಮುದಾಯಕ್ಕೆ ಹಿನ್ನಡೆಯಾಗುತ್ತಿದೆ. ನಾವು ಮೇಲ್ವರ್ಗದವರ ಅಧಿಕಾರವನ್ನು ಕಾಯುವ ಕಾಲಾಳುಗಳಾಗುತ್ತಿದ್ದೇವೆ. ಜಯ ಗಳಿಸುವುದು ಅವರು, ಅವರಹಿಂದೆ ಓಡಾಡಿಕೊಂಡಿರುವುದು ನಾವು ಎಂಬಂತಾಗಿದೆ.

ದೇವರಾಜ ಅರಸು ಮಾಡಿರುವ ವ್ಯವಸ್ಥೆ ನಮ್ಮನ್ನು ಸಾಮಾಜಿಕ ನ್ಯಾಯದ ಕಡೆಗೆ ಕೊಂಡೊಯ್ಯುತ್ತಿತ್ತು. 20 ವರ್ಷಗಳಲ್ಲಿ ನಾವು ಹಿಂದೆ ಹೋಗುತ್ತಿದ್ದೇವೆಂಬ ಆತಂಕ ಕಾಡುತ್ತಿದೆ. ಸಾಮಾಜಿಕ ನ್ಯಾಯದ ರಥವನ್ನು ಹಿಂದಕ್ಕೆ ಎಳೆಯುವ ಷಡ್ಯಂತ್ರ ನಡೆಯುತ್ತಿದೆ. ಇದು ಯಾರಿಗೂ ಅರ್ಥವಾಗುತ್ತಿಲ್ಲ.
ರಾಜೇಂದ್ರ ಚಿಲಿಂಬಿ,
ಯುವವಾಹಿನಿ ಮಂಗಳೂರು ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು. ಬಿಲ್ಲವರ ಏಕೀಕರಣ ಸಮಿತಿಯ ಕೋಶಾಧಿಕಾರಿ.

ಕಾಂಗ್ರೆಸ್‌ನಿಂದ ಸಮುದಾಯದ ಹಿರಿಯ ಜನಪ್ರತಿನಿಧಿಗಳ ಅವಗಣನೆ

ರಾಜ್ಯ ಸರಕಾರದಲ್ಲಿ ಮೊದಲ ಬಾರಿ ಜಯ ಗಳಿಸಿದವರಿಗೂ ಸಚಿವ ಸ್ಥಾನ ಸಿಕ್ಕಿದೆ. ಆದರೆ ಇಷ್ಟು ದೊಡ್ಡ ಬಿಲ್ಲವ ಸಮುದಾಯ ದಲ್ಲಿ ಹಿರಿಯ, ಅನುಭವೀ ಜನಪ್ರತಿನಿಧಿಗಳಿದ್ದರೂ ಅವರನ್ನುಕಡೆಗಣಿಸಲಾಗಿದೆ ಎಂಬ ವ್ಯಾಪಕ ಅಸಮಾಧಾನ ಆ ಸಮು ದಾಯದ ನಾಯಕರಿಂದ ಕೇಳಿಬರುತ್ತಿದೆ. ವಿಶೇಷವಾಗಿ ಸಮುದಾಯದ ಯುವ ಮತದಾರರು ಈ ಬಗ್ಗೆ ಹೆಚ್ಚು ಆಕ್ರೋಶಿತ ರಾಗಿದ್ದಾರೆ. ಬೂದಿ ಮುಚ್ಚಿದ ಕೆಂಡದಂತಿರುವ ಈ ಅಸಮಾಧಾನ ಮುಂಬರುವ ಚುನಾವಣೆಯ ಸಂದರ್ಭದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

ಒಂದು ಅಂದಾಜಿನ ಪ್ರಕಾರ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 15 ಲಕ್ಷದಷ್ಟು ಬಿಲ್ಲವ ಜನಸಂಖ್ಯೆ ಇದ್ದು, ಅವರಲ್ಲಿ ಸುಮಾರು 9 ಲಕ್ಷ ಮತದಾರರಿದ್ದಾರೆ. ಅದರಲ್ಲೂ ದ.ಕ. ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಬಿಲ್ಲವ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಿದ್ದರೂ ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ಬಿಲ್ಲವ ಸಚಿವರಿಲ್ಲ. ಉಡುಪಿಯಲ್ಲಿ ಹಿರಿಯ ಶಾಸಕ ಗೋಪಾಲ ಪೂಜಾರಿಯವರಿಗೆ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅದರ ಬಗ್ಗೆ ಯಾರಿಗೂ ತೃಪ್ತಿಯಿಲ್ಲ. ಉಳಿದಂತೆ ಸಮುದಾಯಕ್ಕೆ ಏನನ್ನೂ ನೀಡದೆ ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆತಂಕ, ಅಸಮಾಧಾನ ಬಿಲ್ಲವ ಸಮುದಾಯದ್ದು.

‘‘ಪ್ರಮುಖ ರಾಜಕೀಯ ಪಕ್ಷಗಳು ಜನಸಂಖ್ಯೆ ಗನುಗುಣ ವಾಗಿ ನಮಗೆ ಯಾವುದೇ ಸ್ಥಾನಮಾನ, ಆದ್ಯತೆ ನೀಡಿಲ್ಲ. ದ.ಕ. ಜಿಲ್ಲೆಯಲ್ಲಿ ನಾವು ಬಹು ಸಂಖ್ಯಾತರು. ನಮಗೆ ಇಲ್ಲಿ ಕನಿಷ್ಠ 3 ಸ್ಥಾನಗಳನ್ನಾದರೂ ನೀಡಬೇಕು. ಆದರೆ ಕಾಂಗ್ರೆಸ್‌ನಿಂದ ಬೆಳ್ತಂಗಡಿಯಲ್ಲಿ 1 ಸ್ಥಾನ ಮಾತ್ರ ಸಿಕ್ಕಿದೆ. ಮುಲ್ಕಿಯೂ ನಮ್ಮ ಕೈ ತಪ್ಪಿದೆ. ಬಿಜೆಪಿಯಲ್ಲೂ ಅನ್ಯಾಯವಾಗಿದೆ. ಆ ಪಕ್ಷದವರೂ ಒಂದು ಸೀಟು ಕೊಡುತ್ತಾರೆ. ಅದೂ ಉಳ್ಳಾಲದಲ್ಲಿ. ನಾವು ಎಲ್ಲಿ ಸೋಲುತ್ತೇವೆಯೋ ಅಲ್ಲಿ ನೀಡುತ್ತಾರೆ. ಕೇವಲ ವೋಟ್ ಬ್ಯಾಂಕ್ ಆಗಿ ಮಾತ್ರವೇ ರಾಜಕೀಯ ಪಕ್ಷಗಳು ನಮ್ಮನ್ನು ಬಳಸಿಕೊಂಡಿವೆ. ನಾವು ಜಾತಿಗನುಗುಣವಾಗಿ, ಜನಸಂಖ್ಯೆಗೆ ಅನುಸಾರವಾಗಿ ಪ್ರಾತಿನಿಧ್ಯ ಕೇಳುತ್ತಿದ್ದೇವೆ’’ ಎನ್ನುತ್ತಾರೆ ಬಿಲ್ಲವ ಸಮುದಾಯ ನಾಯಕ, ಯುವವಾಹಿನಿ ಮಂಗಳೂರು ಘಟಕದ ನಾರಾಯಣಗುರು ತತ್ವಪ್ರಚಾರ ನಿರ್ದೇಶಕ, ಬಿಲ್ಲವರ ಏಕೀಕರಣ ಸಮಿತಿಯ ಕೋಶಾಧಿಕಾರಿ ರಾಜೇಂದ್ರ ಚಿಲಿಂಬಿ.

‘‘ಬಿಲ್ಲವರು ಸಂಘಟಿತರಾಗದಿರುವುದು ಕೂಡಾ ರಾಜಕೀಯ ಪಕ್ಷಗಳ ಈ ಅಸಡ್ಡೆಯ ಧೋರಣೆಗೆ ಕಾರಣವಿರಬಹುದು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಮ್ಮ 260 ಸಂಘಟನೆಗಳಿವೆ. ರಾಜಕೀಯದವರು ತಮ್ಮ ತಂತ್ರಗಾರಿಕೆಯ ಮೂಲಕ ನಮ್ಮನ್ನು ಅವರಿಗೆ ಬೇಕಾದ ಹಾಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ’’ ಎನ್ನುತ್ತಾರೆ ರಾಜೇಂದ್ರ ಚಿಲಿಂಬಿ.

ಪೂಜಾರಿಯ ಕಡೆಗಣನೆ ಬಗ್ಗೆ ಅಸಮಾಧಾನ
ನಮ್ಮ ಸಮುದಾಯಕ್ಕೆ ಹಿರಿಯ ನಾಯಕರಾಗಿದ್ದವರು ಜನಾರ್ದನ ಪೂಜಾರಿ. ಈಗ ರಾಜಕೀಯವಾಗಿ ಅವರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಅವರಿರುವಾಗ ರಾಜಕೀಯದಲ್ಲಿ ನಮಗೆ ಶಕ್ತಿ ಇತ್ತು. ಅವರಿಗೆ ಪರ್ಯಾಯಾಗಿ ನಮ್ಮ ಸಮುದಾಯದಲ್ಲಿ ನಾಯಕರು ಬಂದಿಲ್ಲ. ಎಲ್ಲರಲ್ಲೂ ಕೊರತೆ ಇರುತ್ತದೆ. ಆದರೆ ನಮಗೆ ಸ್ವಾಭಿಮಾನ ಮತ್ತು ಆತ್ಮ ಗೌರವವನ್ನು ತಂದು ಕೊಟ್ಟ ನಾಯಕ ಅವರು. ಅದರಲ್ಲಿ ಎರಡು ಮಾತಿಲ್ಲ. ಅವರಿಗೆ ಮೂರು ಬಾರಿ ಕಾಂಗ್ರೆಸ್ ಪಕ್ಷ ಅವಕಾಶ ನೀಡಿತ್ತು. ಆದರೆ ಅವರನ್ನು ಗೆಲ್ಲಿಸಲಾಗಲಿಲ್ಲ. ಬಿಲ್ಲವ ಸಮುದಾಯ ಅವರಿಗೆ ಮತ ಹಾಕಿದ್ದರೂ, ಇತರ ಜಾತಿಗಳನ್ನು ಬಿಲ್ಲವ ಸಮುದಾಯದ ವಿರುದ್ಧ ಎತ್ತಿಕಟ್ಟಿ, ಅವರಿಗೆ ಮತ ಹಾಕದಂತೆ ಅಪಪ್ರಚಾರ ನಡೆದಿದೆ. ಹಿಂದುಳಿದ ಜಾತಿಗಳಲ್ಲಿ ಐಕ್ಯ ಇಲ್ಲದ ಕಾರಣ, ಪೂಜಾರಿಯವರು ಅಲ್ಪಸಂಖ್ಯಾತರನ್ನು ಓಲೈಸಿದ್ದಾರೆ ಎಂಬ ಅಪಪ್ರಚಾರ ಮಾಡಿ ಅವರನ್ನು ಸೋಲಿಸಲಾಗಿತ್ತು ಎನ್ನುವುದು ಬೇಸರದ ಸಂಗತಿ. ಸೊರಕೆ ಬಿಟ್ಟರೆ ಸದ್ಯ ರಾಜಶೇಖರ ಕೋಟ್ಯಾನ್‌ರವರು ರಾಜಕೀಯ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಎಲ್ಲರನ್ನು ಪ್ರೀತಿಸುವ ಮತ್ತು ಎಲ್ಲರನ್ನು ಸಮಭಾವದಿಂದ ಕಾಣುವ ರಾಜಕೀಯ ನಾಯಕತ್ವ ನಮಗೆ ಅಗತ್ಯವಿದೆ. ಎಲ್ಲಾ ಬಿಲ್ಲವರನ್ನು ಒಗ್ಗೂಡಿಸಿ ಜತೆಗೆ ಕರೆದೊಯ್ಯುವ ನಾಯಕರು ನಮಗೆ ಬೇಕಾಗಿದ್ದಾರೆ. ಜನಾರ್ದನ ಪೂಜಾರಿಯವರ ನಂತರ ನಮಗೆ ಅಷ್ಟೊಂದು ಪ್ರಬಲ ರಾಜಕೀಯ ನಾಯಕರು ದೊರೆತಿಲ್ಲ. ಇದು ಬಿಜೆಪಿಯಲ್ಲೂ ಇಲ್ಲ. ಕಾಂಗ್ರೆಸ್‌ನಲ್ಲೂ ಇಲ್ಲ ಎಂದು ರಾಜೇಂದ್ರ ಚಿಲಿಂಬಿ ವಿಶ್ಲೇಷಿಸುತ್ತಾರೆ.

ಕಾಂಗ್ರೆಸ್‌ನಲ್ಲಿ ಬಿಲ್ಲವರಿಗೆ ಪ್ರಾತಿನಿಧ್ಯದ ತೀವ್ರ ಕೊರತೆ
ಸದ್ಯ ದ.ಕ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಬೆಳ್ತಂಗಡಿಯ ಶಾಸಕರಾಗಿರುವ ವಸಂತ ಬಂಗೇರ ಹಾಗೂ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾಗಿರುವ ಹರೀಶ್ ಕುಮಾರ್ ಅವರನ್ನು ಹೊರತುಪಡಿಸಿದರೆ ಯಾರಿಗೂ ರಾಜಕೀಯವಾಗಿ ಉನ್ನತ ಸ್ಥಾನಮಾನ ಸಿಕ್ಕಿಲ್ಲ. ದ.ಕ. ಜಿಲ್ಲೆಯಲ್ಲಿ ಬಿಲ್ಲವರು ಬಹುಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಕನಿಷ್ಠ ದ.ಕ. ಜಿಲ್ಲೆಯಲ್ಲಿ 3 ಸ್ಥಾನಗಳನ್ನು ಬಿಲ್ಲವ ಸಮುದಾಯಕ್ಕೆ ನೀಡಬೇಕು. ಕವಿತಾ ಸನಿಲ್ ಅಥವಾ ಇನ್ನೊಬ್ಬರಿಗೇ ನೀಡಬೇಕೆಂದು ನಾನು ಹೇಳುತ್ತಿಲ್ಲ. ಬದಲಾಗಿ ಅದು ಸಮುದಾಯದ ಯಾರಿಗಾದರೂ ಸಿಗಬೇಕು ಎಂಬುದು ನನ್ನ ಆಶಯ.
ಸಮುದಾಯ ಈ ಬಗ್ಗೆ ಪ್ರಶ್ನಿಸಿದರೆ, ಜನಾರ್ದನ ಪೂಜಾರಿಯವರನ್ನು ಸೋಲಿಸಲಾಗಿದೆ ಎಂದು ಪ್ರತಿಕ್ರಿಯೆ ಬರುತ್ತದೆ. ಆ ಮಾತು ಸರಿಯಲ್ಲ. ಜನಸಂಖ್ಯೆಗೆ ಅನುಗುಣವಾಗಿ ಪಕ್ಷ ಸ್ಥಾನವನ್ನು ನೀಡಬೇಕು.
ಕವಿತಾ ಸನಿಲ್- ಮೇಯರ್, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News