ಫೋರ್ಟಿಸ್ ಆಸ್ಪತ್ರೆ ಮೃತ ಡೆಂಗ್ ರೋಗಿಯ ಕುಟುಂಬಕ್ಕೆ ಶೇ.1700ರಷ್ಟು ಅಧಿಕ ಶುಲ್ಕ ವಿಧಿಸಿತ್ತು: ಎನ್‌ಪಿಪಿಎ

Update: 2017-12-16 09:39 GMT

ಹೊಸದಿಲ್ಲಿ,ಡಿ.16: ಡೆಂಗ್ ಜ್ವರದಿಂದಾಗಿ ಏಳರ ಹರೆಯದ ಬಾಲಕಿ ಆದ್ಯಾ ಕೊನೆಯುಸಿರೆಳೆದಿದ್ದ ಗುರ್ಗಾಂವ್‌ನ ಫೋರ್ಟಿಸ್ ಆಸ್ಪತ್ರೆಯು ಆಕೆಯ ಚಿಕಿತ್ಸೆಗಾಗಿ ಬಳಸಲಾಗಿದ್ದ ಸಿರಿಂಜ್, ಕೈಗವುಸು ಇತ್ಯಾದಿಗಳು ಮತ್ತು ಔಷಧಿಗಳಿಗಾಗಿ ಶೇ.1700ರಷ್ಟು ಅಧಿಕ ಶುಲ್ಕವನ್ನು ವಿಧಿಸಿತ್ತು ಎಂದು ರಾಷ್ಟ್ರೀಯ ಔಷಧಿ ಬೆಲೆ ನಿಗದಿ ಪ್ರಾಧಿಕಾರ (ಎನ್‌ಪಿಪಿಎ)ವು ತನ್ನ ವರದಿಯಲ್ಲಿ ಬಹಿರಂಗಗೊಳಿಸಿದೆ.

ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆದ್ಯಾಳ ಚಿಕಿತ್ಸೆ ಸಂದರ್ಭ ಬಳಸಲಾಗಿದ್ದ ‘ಥ್ರೀ ವೇ ಸ್ಟಾಪ್ ಕಾಕ್’ಗೆ ತನ್ನ ಖರೀದಿ ಬೆಲೆಯ ಮೇಲೆ ಶೇ.1737ರಷ್ಟು ಲಾಭಾಂಶವನ್ನಿಟ್ಟುಕೊಂಡಿತ್ತು ಎಂದು ಅದು ಹೇಳಿದೆ.

ಸಿರಿಂಜ್, ಕೈಗವುಸುಗಳು, ಪುಟ್ಟ ಟವೆಲ್‌ಗಳಂತಹ ಬಳಸಿ ಎಸೆಯುವ ವಸ್ತುಗಳನ್ನು ಪ್ರತಿಯೊಂದಕ್ಕೆ 5.77 ರೂ.ದರದಲ್ಲಿ ಆಸ್ಪತ್ರೆಯು ಖರೀದಿಸಿತ್ತಾದರೂ ಆದ್ಯಾಳ ಹೆತ್ತವರ ಕೈಗಿತ್ತ ಬಿಲ್‌ನಲ್ಲಿ ಪ್ರತಿಯೊಂದಕ್ಕೂ 106 ರೂ.ಶುಲ್ಕವನ್ನು ವಿಧಿಸಿದೆ ಎನ್ನುವುದನ್ನೂ ವರದಿಯು ಬೆಟ್ಟು ಮಾಡಿದೆ.

ಆಸ್ಪತ್ರೆಯು ದುಬಾರಿ ಶುಲ್ಕಗಳನ್ನು ವಿಧಿಸಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಖರೀದಿ ಬಿಲ್‌ಗಳನ್ನು ತನಗೆ ಒದಗಿಸುವಂತೆ ಎನ್‌ಪಿಪಿಎ ಕಳೆದ ತಿಂಗಳು ಫೋರ್ಟಿಸ್‌ಗೆ ಸೂಚಿಸಿತ್ತು.

ಅನುಸೂಚಿತವಲ್ಲದ ಔಷಧಿಗಳಿಗೆ ಆಸ್ಪತ್ರೆಯು ಶೇ.914ರಷ್ಟು ಅಧಿಕ ಬೆಲೆಗಳನ್ನು ವಿಧಿಸಿದೆ. ಪ್ರತಿ ಯೂನಿಟ್‌ಗೆ 28.35 ರೂ.ಬೆಲೆಯಿರುವ ಡೊಟಾಮಿನ್ 200 ಎಂಜಿಗೆ ಅದು 287.50 ರೂ.(ಶೇ.914ರಷ್ಟು ಅಧಿಕ), ಪ್ರತಿ ಯೂನಿಟ್‌ಗೆ 404.32 ರೂ.ಬೆಲೆಯಿರುವ ಮೆರೊಕ್ರಿಟ್ 1ಜಿಎಂಗೆ ಅದು 3112.50 ರೂ.(ಶೇ.670ರಷ್ಟು ಅಧಿಕ) ಶುಲ್ಕ ವಿಧಿಸಿದೆ ಎಂದು ವರದಿಯು ಹೇಳಿದೆ.

ಬೆಲೆ ನಿಯಂತ್ರಣದ ವ್ಯಾಪ್ತಿಯಲ್ಲಿರುವ ಅನುಸೂಚಿತ ಔಷಧಿಗಳಿಗೆ ಆಸ್ಪತ್ರೆಯು ಶೇ.343ರವರೆಗೆ ಅಧಿಕ ದರವನ್ನು ವಿಧಿಸಿದೆ. ಪ್ರತಿ ಯೂನಿಟ್‌ಗೆ 15.75 ರೂ.ನಂತೆ ಖರೀದಿಸಿದ್ದ ಟ್ರಾನೆಮಿಕ್‌ಗೆ ಅದು 69.77 ರೂ.ಬೆಲೆಯನ್ನು ಹಾಕಿದೆ.

ಆದ್ಯಾಳ ಚಿಕಿತ್ಸೆಯಲ್ಲಿ ಬಳಸಲಾಗಿದ್ದ 39 ಅನುಸೂಚಿತ ಮತ್ತು 41 ಅನುಸೂಚಿತ ವಲ್ಲದ ಔಷಧಿಗಳು ಹಾಗೂ 96 ಬಳಸಿ ಎಸೆಯಲಾಗುವ ಸಿರಿಂಜ್‌ನಂತಹ ವಸ್ತುಗಳ ಪಟ್ಟಿಯನ್ನು ಎನ್‌ಪಿಪಿಎ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಎನ್‌ಪಿಪಿಎ ಹಾಲಿ ಕಾನೂನುಗಳಿಗೆ ಅನುಗುಣವಾಗಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಆಸ್ಪತ್ರೆಯ ವಿರುದ್ಧ ಕ್ರಮಗಳನ್ನು ಜರುಗಿಸಲಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News