×
Ad

ಚೆಕ್ ಅಮಾನ್ಯ ಪ್ರಕರಣ: ಮಧ್ಯಂತರ ಪರಿಹಾರ ನೀಡಲು ಕಾಯ್ದೆಗೆ ತಿದ್ದುಪಡಿ; ಸಂಪುಟ ಅನುಮೋದನೆ

Update: 2017-12-16 21:59 IST

ಅಹ್ಮದಾಬಾದ್, ಡಿ. 16: ನ್ಯಾಯಾಲಯದಲ್ಲಿ ಚೆಕ್ ಅಮಾನ್ಯ ಪ್ರಕರಣಗಳ ವಿಚಾರಣೆ ದೀರ್ಘ ಕಾಲ ನಡೆಯುತ್ತದೆ. ಈ ಸಂದರ್ಭ ಪಾವತಿದಾರರು ಪಾವತಿ ತಡೆ ಹಿಡಿಯುವ ಸಾಧ್ಯತೆ ಇರುತ್ತದೆ. ಆದುದರಿಂದ ಪಾವತಿ ಸ್ವೀಕರಿಸುವ ವ್ಯಕ್ತಿಗೆ ಮಧ್ಯಂತರ ಪರಿಹಾರ ನೀಡಲು ಪ್ರಸಕ್ತ ಕಾನೂನಿಗೆ ತಿದ್ದುಪಡಿ ತರಲು ಸಂಪುಟ ಶನಿವಾರ ಅನುಮೋದನೆ ನೀಡಿದೆ.

  ಈ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆ ತಿದ್ದುಪಡಿ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೇ ಇದ್ದಾಗ ಚೆಕ್ ಅಮಾನ್ಯಗೊಂಡ ಸಂದರ್ಭ ಪಾವತಿದಾರರು ಪಾವತಿ ಸ್ವೀಕರಿಸುವ ವ್ಯಕ್ತಿಗೆ ಮಧ್ಯಂತರ ಪರಿಹಾರ ನೀಡುವಂತೆ ಆದೇಶ ನೀಡಲು ನ್ಯಾಯಾಲಯಕ್ಕೆ ಅವಕಾಶ ನೀಡುತ್ತದೆ.

ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ತಿದ್ದುಪಡಿ ಕಾಯ್ದೆ ಮಂಡನೆಯಾಗಲಿದೆ.

ಸಂಪುಟ ನಿರ್ಧಾರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ರವಿಶಂಕರ್ ಪ್ರಸಾದ್, 1881ರ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ ಎಂದರು. ಆದರೆ, ಅವರು ಪ್ರಸ್ತಾಪಿತ ಕಾಯ್ದೆ ತಿದ್ದುಪಡಿ ಬಗ್ಗೆ ವಿವರ ನೀಡಿಲ್ಲ.

ಈ ತಿದ್ದುಪಡಿ, ವಿಚಾರಣೆ ನಡೆಯುತ್ತಿರುವ ಸಂದರ್ಭ ಅಮಾನ್ಯಗೊಂಡ ಚೆಕ್‌ನ ಒಂದು ಭಾಗವನ್ನು ಮಧ್ಯಂತರ ಪರಿಹಾರವಾಗಿ ಪಾವತಿ ಸ್ವೀಕರಿಸುವವರಿಗೆ ನೀಡುವಂತೆ ಆದೇಶಿಸಲು ನ್ಯಾಯಾಲಯಕ್ಕೆ ಅವಕಾಶ ನೀಡುತ್ತದೆ.

ಪ್ರಕರಣದಲ್ಲಿ ಪಾವತಿ ಸ್ವೀಕರಿಸುವ ವ್ಯಕ್ತಿ ಖುಲಾಸೆಗೊಂಡರೆ, ಮೊತ್ತವನ್ನು ಬಡ್ಡಿಯೊಂದಿಗೆ ಮಧ್ಯಂತರ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಪಾವತಿದಾರನಿಗೆ ಆದೇಶಿಸಬಹುದು. ಅಲ್ಲದೆ, ಮೇಲ್ಮನವಿ ಸಲ್ಲಿಸುವ ಸಂದರ್ಭ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪಿನಂತೆ ಪರಿಹಾರದ ಒಂದು ಭಾಗವನ್ನು ಅರ್ಜಿದಾರರ ಖಾತೆಗೆ ಜಮಾ ಮಾಡುವಂತೆ ಆದೇಶ ನೀಡುವ ಅಧಿಕಾರ ಸಂಬಂಧಿತ ನ್ಯಾಯಾಲಯಕ್ಕೆ ಇರುತ್ತದೆ. ವ್ಯಾಪಾರ ಹಾಗೂ ವಾಣಿಜ್ಯ, ಮುಖ್ಯವಾಗಿ ಎಂಎಸ್‌ಎಂಇ ವಲಯ ಹಾಗೂ ಇದರೊಂದಿಗೆ ಹಣಕಾಸಿನ ಸಾಧನವಾದ ಚೆಕ್‌ನ ಉತ್ತರದಾಯಿತ್ವ ಹೆಚ್ಚಿಸಲು ಈ ತಿದ್ದುಪಡಿ ನೆರವು ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News