ಉನ್ನತ ಜಾತಿಯ ಬಡವರಿಗೂ ಮೀಸಲಾತಿ ಪರಿಗಣಿಸಿ: ನ್ಯಾಯಾಲಯ
ಚೆನ್ನೈ, ಡಿ.16: ಮದ್ರಾಸ್ ನ್ಯಾಯಾಲಯ ನೀಡಿದ ಮಹತ್ವದ ಆದೇಶವೊಂದರಲ್ಲಿ ಉನ್ನತ ಜಾತಿಯ ಬಡವರಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ತಮಿಳು ನಾಡು ಸರಕಾರಕ್ಕೆ ಸೂಚಿಸಿದೆ.
ಮೇಲ್ವರ್ಗದ ಜಾತಿಗಳಲ್ಲಿರುವ ಬಡವರನ್ನು ನಿರ್ಲಕ್ಷಿಸಲಾಗುತ್ತಿದೆ ಮತ್ತು ಸಾಮಾಜಿಕ ನ್ಯಾಯದ ಹೆಸರಲ್ಲಿ ಪ್ರತಿಭಟನಾ ಧ್ವನಿಗಳನ್ನು ಎದುರಿಸಬೇಕಾದೀತು ಎಂಬ ಭಯದಿಂದ ಯಾರೂ ಕೂಡಾ ಅವರ ಪರವಾಗಿ ಮಾತನಾಡುತ್ತಿಲ್ಲ ಎಂದು ನ್ಯಾಯಾಧೀಶರಾದ ಎನ್. ಕಿರುಬಕರನ್ ಶುಕ್ರವಾರ ತಿಳಿಸಿದರು.
ಮೀಸಲಾತಿ ಅಥವಾ ಮೇಲ್ವರ್ಗದ ಸಮುದಾಯದಲ್ಲಿರುವ ಅರ್ಹ ಬಡವರಿಗೆ ನೀಡಲಾಗುವ ಸಹಾಯವು ಸಮಾಜದ ಇತರ ವಿಭಾಗದ ಜನರು ಅನುಭವಿಸುತ್ತಿರುವ ಮೀಸಲಾತಿಗೆ ವಿರುದ್ಧವಾಗಿದೆ ಎಂದು ಯಾರೂ ಭಾವಿಸಬಾರದು ಎಂದು ತಿಳಿಸಿದ ನ್ಯಾಯಾಧೀಶರು, ಎಲ್ಲಾ ಸಮುದಾಯದಲ್ಲೂ ಬಡವರು ಇದ್ದಾರೆ ಎಂಬುದು ನ್ಯಾಯಾಲಯಕ್ಕೆ ತಿಳಿದಿದೆ ಮತ್ತು ಅವರು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಮೇಲ್ಜಾತಿಯವೇ ಆಗಲಿ ಅಥವಾ ಹಿಂದುಳಿದ ವರ್ಗದವನೇ ಆಗಲಿ ಬಡವನೆಂದರೆ ಆತ ಬಡವನೆ. ಅಂತಹ ಅರ್ಹ ಬಡವರಿಗೆ ಕೇವಲ ಹಣದ ಮೂಲಕವಲ್ಲ ಶೈಕ್ಷಣಿಕ ಮತ್ತು ಔದ್ಯೋಗಿಕ ರಂಗದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದರು. ಆರ್ಥಿಕ ಸ್ಥಿತಿಯ ಆಧಾರದಲ್ಲಿ ಉನ್ನತ ಜಾತಿಯ ಬಡವರಿಗೆ ಮೀಸಲಾತಿಯನ್ನು ಒದಗಿಸಲು ಇರುವ ಸಾಧ್ಯತೆಗಳ ಬಗ್ಗೆ ತಿಳಿಯುವಂತೆ ನ್ಯಾಯಾಲಯವು ಸರಕಾರಕ್ಕೆ ಸೂಚಿಸಿದೆ. ಸರಕಾರಿ ಕಾಲೇಜುಗಳಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದ್ದ ಎಂಬಿಬಿಎಸ್ ಸೀಟ್‌ಗಳನ್ನು ಹಿಂದುಳಿದ ವರ್ಗ ಮತ್ತು ಎಂಬಿಸಿ ವರ್ಗಕ್ಕೆ ನೀಡಿರುವುದು ಕಾನೂನು ಬಾಹಿರ ಮತ್ತು 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಘೋಷಿಸುವಂತೆ 14 ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೇಲ್ಮನವಿಯ ಮಧ್ಯಂತರ ಆದೇಶವನ್ನು ಹೊರಡಿಸುವ ವೇಳೆ ನ್ಯಾಯಾಧೀಶರು ಈ ಹೇಳಿಕೆಯನ್ನು ನೀಡಿದರು.
ರಾಜ್ಯದಲ್ಲಿರುವ ಮೀಸಲಾತಿ ನೀತಿಯಂತೆ ಸಾಮಾನ್ಯ ವರ್ಗಗಳ ವಿಭಾಗದಲ್ಲಿ ನೀಡಲಾಗಿರುವ ಸೀಟ್‌ಗಳಿಗೆ ಮರುಪರಿಶೀಲನೆ ನಡೆಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ನ್ಯಾಯಾಲಯ ಸೂಚಿಸುವಂತೆ ಮೇಲ್ಮನವಿಯಲ್ಲಿ ಮನವಿ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಸರಕಾರ ಸಲ್ಲಿಸಿದ್ದ ಅಫಿದಾವಿತ್‌ಗೆ ಉತ್ತರಿಸಿದ ನ್ಯಾಯಾಧೀಶರು 22 ಸರಕಾರಿ ಕಾಲೇಜುಗಳಲ್ಲಿ 2651 ಎಂಬಿಬಿಎಸ್ ಸೀಟ್‌ಗಳಿವೆ. ಈ ಪೈಕಿ 31% ಸಾಮಾನ್ಯ ವರ್ಗ, 26% ಹಿಂದುಳಿದ ವರ್ಗ, 4% ಹಿಂದುಳಿದ ವರ್ಗ (ಮುಸ್ಲಿಂ), 20% ಎಂಬಿಸಿ, 18% ಪರಿಶಿಷ್ಟ ಜಾತಿ ಮತ್ತು 1% ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ.
31% ಅಂದರೆ 822 ಸೀಟ್‌ಗಳಿಗೆ ಕೇವಲ ಉನ್ನತ ವರ್ಗದ ವಿದ್ಯಾರ್ಥಿಗಳಿಂದ ಮಾತ್ರವಲ್ಲ ಯೋಗ್ಯತೆಯ ಆಧಾರದಲ್ಲಿ ಇತರ ಮೀಸಲಾತಿ ಇರುವ ವಿಭಾಗಗಳ ವಿದ್ಯಾರ್ಥಿಗಳಿಂದಲೂ ಸ್ಪರ್ಧೆಯಿರುತ್ತದೆ. ಈ ಪ್ರಕ್ರಿಯೆಯಲ್ಲಿ ಅಂತಿಮವಾಗಿ 194 ಸೀಟ್‌ಗಳು ಮೇಲ್ವರ್ಗದ ವಿದ್ಯಾರ್ಥಿಗಳ ಪಾಲಾಗಿದೆ ಅಂದರೆ ಅದು ಕೇವಲ 7.31%ಕ್ಕೆ ಸಮ ಎಂದು ನ್ಯಾಯಾಧೀಶರು ತಿಳಿಸಿದರು.
ಈ ಆಧಾರದಲ್ಲಿ ಹೇಳುವುದಾದರೆ ಬಹುತೇಕ ಸಮುದಾಯಗಳನ್ನು ಹಿಂದುಳಿದ, ಎಂಬಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ವರ್ಗೀಕರಿಸಲಾಗಿದೆ. ಕೇವಲ ಕೆಲವನ್ನು ಮಾತ್ರ ಉನ್ನತ ಜಾತಿಗಳೆಂದು ಕರೆಯಲಾಗುತ್ತಿದೆ. ಬಹುತೇಕ ಎಲ್ಲಾ ಸಮುದಾಯವು ತಮ್ಮ ಹಿಂದುಳಿದ ಅಥವಾ ಅತ್ಯಂತ ಹಿಂದುಳಿದ ಜಾತಿಗಳೆಂದು ಕರೆಸಿಕೊಳ್ಳಬೇಕೆಂದು ಬಯಸಿದರೆ ಸಾಮಾಜಿಕ ಸ್ಥಿತಿ ಮತ್ತು ಆರ್ಥಿಕ ಸ್ಥಿತಿಯ ಆಧಾರದಲ್ಲಿ ಮೀಸಲಾತಿಯನ್ನು ಒದಗಿಸುವ ಉದ್ದೇಶವೇ ಉಪಯೋಗವಿಲ್ಲದಂತಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.