ಏರ್‌ಟೆಲ್‌ನ ಆಧಾರ್ ಸಂಬಂಧಿತ ಇ-ಕೆವೈಸಿ ಸೇವೆಗೆ ತಾತ್ಕಾಲಿಕ ಬ್ರೇಕ್

Update: 2017-12-17 16:38 GMT

ಹೊಸದಿಲ್ಲಿ,ಡಿ.17: ಸಿಮ್ ಕಾರ್ಡಗಳ ಮರುದೃಢೀಕರಣ ಉದ್ದೇಶದ ಆಧಾರ್ ಇ-ಕೆವೈಸಿ ಪ್ರಕ್ರಿಯೆಯನ್ನು ದುರುಪಯೋಗಿಸಿಕೊಂಡು ಗ್ರಾಹಕರ ಒಪ್ಪಿಗೆಯಿಲ್ಲದೆ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕಿನಲ್ಲಿ ಅವರ ಖಾತೆಗಳನ್ನು ತೆರೆದ ಆರೋಪದಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಏರ್‌ಟೆಲ್‌ನ ಇ-ಕೆವೈಸಿ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಏರ್‌ಟೆಲ್‌ನ ಮಳಿಗೆಗಳಲ್ಲಿ ಮೊಬೈಲ್ ಸಿಮ್‌ಗಳಿಗೆ ಆಧಾರ್ ಜೋಡಣೆ ಮಾಡುವಾಗ ಗ್ರಾಹಕರಿಗೆ ಯಾವುದೇ ಸೂಚನೆಯನ್ನು ನೀಡದೇ ಏರ್‌ಟೆಲ್ ಪೇಮೆಂಟ್ ಬ್ಯಾಂಕಿನಲ್ಲಿ ಖಾತೆಗಳನ್ನೂ ತೆರೆಯಲಾಗುತ್ತಿದೆ ಮತ್ತು ಅವರ ಅಡುಗೆ ಅನಿಲ ಸಿಲಿಂಡರ್‌ನ ಸಬ್ಸಿಡಿ ಮೊತ್ತವು ಅದರಲ್ಲಿ ಜಮಾ ಆಗುವಂತೆ ಮಾಡಲಾಗುತ್ತಿದೆ ಎಂದು ಗ್ರಾಹಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಎರ್‌ಟೆಲ್‌ನ ಇ-ಕೆವೈಸಿ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಯುಐಡಿಎಐ ತಿಳಿಸಿದೆ.

ಈ ಕ್ರಮದಿಂದಾಗಿ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಿಸಲು ಮತ್ತು ಆಧಾರ್ ಸಂಖ್ಯೆ ಬಳಸಿಕೊಂಡು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕಿನಲ್ಲಿ ಹೊಸ ಖಾತೆಯನ್ನು ತೆರೆಯಲು ಏರ್‌ಟೆಲ್‌ಗೆ ಸಾಧ್ಯವಾಗುವುದಿಲ್ಲ.

ಇ-ಕೆವೈಸಿ ಪರವಾನಿಗೆಯನ್ನು ರದ್ದುಗೊಳಿಸಿರುವ ಯುಐಡಿಎಐ ಮಧ್ಯಂತರ ಆದೇಶ ಸಂಸ್ಥೆಗೆ ತಲುಪಿರುವುದನ್ನು ಖಚಿತಪಡಿಸಿರುವ ಏರ್‌ಟೆಲ್ ವಕ್ತಾರರು, ಇದಕ್ಕೆ ಶೀಘ್ರವೇ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ. ಏರ್‌ಟೆಲ್ ಪೇಮೆಂಟ್ ಬ್ಯಾಂಕಿಗೆ ಸಂಬಂಧಿಸಿದಂತೆ ಅದು ಸೂಚಿಸಿರುವ ನಿರ್ದೇಶಗಳನ್ನು ಅದಕ್ಕೆ ತೃಪ್ತಿಯಾಗುವಂತೆ ಪಾಲಿಸಲಿದ್ದೇವೆ ಎಂದು ತಿಳಿಸಿದರು.

 ಆಧಾರ್ ಕಾಯ್ದೆಯ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಏರ್‌ಟೆಲ್ ಮತ್ತು ಏರ್‌ಟೆಲ್ ಪೇಮೆಂಟ್ ಬ್ಯಾಂಕಿನ ಸಿಸ್ಟಮ್‌ಗಳ ಆಡಿಟ್‌ಗೂ ಯುಐಡಿಎಐ ಆದೇಶಿಸಿದೆ. ಇದು ಪೂರ್ಣಗೊಂಡ ಬಳಿಕ ಅಂತಿಮ ನಿರ್ಧಾರವನ್ನು ಅದು ಕೈಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News