ಕಾಂಡೋಮ್ ಜಾಹೀರಾತು ನಿಷೇಧಕ್ಕೆ ವಿರೋಧ

Update: 2017-12-17 16:39 GMT

ಹೊಸದಿಲ್ಲಿ, ಡಿ.17: ಟಿವಿ ಚಾನೆಲ್‌ಗಳು ರಾತ್ರಿ 10ರಿಂದ ಮುಂಜಾನೆ 6ರವರೆಗೆ ಕಾಂಡೋಮ್ ಜಾಹೀರಾತು ಪ್ರಸಾರ ಮಾಡುವುದನ್ನು ನಿಷೇಧಿಸುವುದರಿಂದ ಲೈಂಗಿಕ ಮತ್ತು ಪ್ರಜನನ ಆರೋಗ್ಯ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸಾಧಿಸಿದ ಅಭಿವೃದ್ಧಿಯನ್ನು ನಿಷ್ಪಲಗೊಳಿಸಿದಂತಾಗುತ್ತದೆ ಎಂದು ಆರೋಗ್ಯ ಕ್ಷೇತ್ರದ ಸಂಸ್ಥೆಗಳು ತಿಳಿಸಿವೆ. ರಾತ್ರಿ 10ರಿಂದ ಮುಂಜಾನೆ 6ರವರೆಗೆ ಕಾಂಡೋಮ್ ಜಾಹೀರಾತು ಪ್ರಸಾರ ನಿಷೇಧಿಸುವ ಸರಕಾರದ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿರುವ ‘ದಿ ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾ(ಪಿಎಫ್‌ಐ)’ , ಇದರ ಬದಲು ಸಿನೆಮಾ ಉದ್ಯಮದಲ್ಲಿರುವಂತೆ ಜಾಹೀರಾತುಗಳು ಒಳಗೊಂಡಿರುವ ವಿಷಯಗಳನ್ನು ಆಧರಿಸಿ, ಅವುಗಳಿಗೆ ಶ್ರೇಯಾಂಕ ನೀಡಿ ಪ್ರಸಾರ ಮಾಡಬಹುದು ಎಂದು ಶಿಫಾರಸು ಮಾಡಿದೆ.

 ಕುಟುಂಬ ನಿಯಂತ್ರಣ ಯೋಜನೆಯಡಿ ಸರಕಾರ ಕೆಲವೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾಂಡೋಮ್ ಬಳಕೆಯನ್ನು ಉತ್ತೇಜಿಸುವುದು ಇದರಲ್ಲಿ ಸೇರಿದೆ. ಹೀಗಿರುವಾಗ ಕಾಂಡೋಮ್ ಜಾಹೀರಾತನ್ನು ಸಾರಾಸಗಟಾಗಿ ನಿಷೇಧಿಸುವುದು ಸರಿಯಲ್ಲ ಎಂದು ಪಿಎಫ್‌ಐ ಕಾರ್ಯನಿರ್ವಾಹಕ ನಿರ್ದೇಶಕಿ ಪೂನಮ್ ಮುತ್ರೇಜ ಹೇಳಿದ್ದಾರೆ. ಕೇವಲ ಶೇ.5.6ರಷ್ಟು ಪುರುಷರು ಮಾತ್ರ ಕಾಂಡೋಮ್ ಬಳಸುತ್ತಿದ್ದರೂ, ಎಚ್‌ಐವಿ/ಏಡ್ಸ್ ಮತ್ತಿತರ ಲೈಂಗಿಕ ರೋಗಗಳು ಹರಡುವುದನ್ನು ತಡೆಗಟ್ಟಲು ಕಾಂಡೋಮ್ ಅತ್ಯುತ್ತಮ ವಿಧಾನವಾಗಿದೆ . ಅಲ್ಲದೆ ಕುಟುಂಬ ನಿಯಂತ್ರಣದ ಜವಾಬ್ದಾರಿ ವಹಿಸಿಕೊಳ್ಳುವ ಪುರುಷರನ್ನು ಕಾಂಡೋಮ್ ಧರಿಸುವಂತೆ ಇಂತಹ ಜಾಹೀರಾತುಗಳು ಪ್ರೋತ್ಸಾಹಿಸುತ್ತವೆ ಎಂದವರು ಹೇಳಿದ್ದಾರೆ.

ಅಶ್ಲೀಲ ವಿಷಯಗಳಿಂದ ಮಕ್ಕಳನ್ನು ರಕ್ಷಿಸಲು ಹಾಗೂ ಅನಾರೋಗ್ಯಕರ ಚಾಳಿಗಳಿಗೆ ಮಕ್ಕಳು ಬಲಿಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಇಂದಿನ ದಿನದಲ್ಲಿ ಮಕ್ಕಳಿಗೆ ಸುಲಭದಲ್ಲಿ ಲಭ್ಯವಾಗುವ ಹಲವಾರು ಮಾಧ್ಯಮಗಳಿವೆ. ಇವೆಲ್ಲವನ್ನೂ ನಿಯಂತ್ರಿಸಲಾಗದು. ಆದ್ದರಿಂದ ಈ ವಿಷಯದ ಬಗ್ಗೆ ಸಂವೇದನಾಶೀಲ ಉಪಕ್ರಮದ ಅಗತ್ಯವಿದೆ. ಜಾಹೀರಾತುಗಳು ಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ಕುಟುಂಬ ನಿಯಂತ್ರಣದ ಭಾವನೆಯನ್ನು ಉತ್ತೇಜಿಸುವಂತಿದ್ದರೆ ಇವುಗಳಿಗೆ ನಿಷೇಧ ಸರಿಯಲ್ಲ ಎಂದು ಪೂನಮ್ ಅಭಿಪ್ರಾಯಪಟ್ಟಿದ್ದಾರೆ. ಲೈಂಗಿಕ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒಗಳನ್ನು ಒಗ್ಗೂಡಿಸಿ ಆರೋಗ್ಯ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಇತರ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ತಿಳಿಸಿವೆ.

ಕಾಂಡೋಮ್ ಬಳಕೆಯನ್ನು ಜನಪ್ರಿಯಗೊಳಿಸಲು ಪ್ರಯತ್ನ ಮುಂದುವರಿದಿರುವ ಸಂದರ್ಭದಲ್ಲಿ ಕಾಂಡೋಮ್ ಬಳಕೆಗೆ ನಿಷೇಧ ಹೇರುವ ಕ್ರಮ ಸರಿಯಲ್ಲ ಎಂದು ಏಡ್ಸ್ ಹೆಲ್ತ್‌ಕೇರ್ ಫೌಂಡೇಷನ್‌ನ ಕಾರ್ಯಕ್ರಮ ನಿರ್ದೇಶಕ ವಿ.ಶ್ಯಾಂಪ್ರಸಾದ್ ತಿಳಿಸಿದ್ದಾರೆ. ರಾತ್ರಿ 10ರಿಂದ ಮುಂಜಾನೆ 6ರವರೆಗೆ ಕಾಂಡೋಮ್ ಜಾಹೀರಾತು ಪ್ರಸಾರ ನಿಷೇಧಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲಾ ಟಿವಿ ಚಾನೆಲ್‌ಗಳಿಗೆ ಡಿಸೆಂಬರ್ 11ರಂದು ಸಲಹಾತ್ಮಕ ಪತ್ರ ರವಾನಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News