ಗುಜರಾತ್ ನಲ್ಲಿ ಗೆಲುವಿನಲ್ಲೂ ಬಿಜೆಪಿಗೆ ಕಹಿ: ಕಮಲದ ಕೈಬಿಟ್ಟ ಗ್ರಾಮೀಣ ಮತದಾರರು

Update: 2017-12-18 15:22 GMT

ಹೊಸದಿಲ್ಲಿ, ಡಿ.18: ಮಿಷನ್- 150 ಎಂಬ ಘೋಷಣೆಯೊಂದಿಗೆ ಗುಜರಾತ್‌ನಲ್ಲಿ ಭಾರೀ ಬಹುಮತ ಸಾಧಿಸಿ ಗದ್ದುಗೆ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಸರಳ ಬಹುಮತ ಪಡೆದು ನಿಟ್ಟುಸಿರುಬಿಟ್ಟಿದೆ. ಆದರೆ ಲಭ್ಯ ಅಂಕಿಅಂಶಗಳ ಪ್ರಕಾರ ನಗರಪ್ರದೇಶ ಹಾಗೂ ಅರೆನಗರ ಪ್ರದೇಶಗಳಲ್ಲಿ ಬಿಜೆಪಿಯ ಸಾಧನೆ ಉತ್ತಮವಾಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಕಳಪೆ ಸಾಧನೆ ತೋರಿದೆ. ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌ನ ಸಾಧನೆ ಅತ್ಯುತ್ತಮವಾಗಿದೆ. ಗ್ರಾಮೀಣ ಮತದಾರರು ಬಿಜೆಪಿಯನ್ನು ವಿರೋಧಿಸಿರುವುದು ಸ್ಪಷ್ಟವಾಗಿದೆ.

  ನಗರಪ್ರದೇಶದಲ್ಲಿರುವ 73 ಸ್ಥಾನಗಳಲ್ಲಿ 55 ಸ್ಥಾನಗಳು ಬಿಜೆಪಿ ಪಾಲಾಗಿವೆ. ಕಾಂಗ್ರೆಸ್‌ಗೆ ಕೇವಲ 18 ಸ್ಥಾನಗಳಷ್ಟೇ ಲಭ್ಯವಾಗಿದೆ. ನಗರಪ್ರದೇಶದಲ್ಲಿರುವ ಜಾಮ್‌ನಗರ ಉತ್ತರ, ರಾಜ್‌ಕೋಟ್ ದಕ್ಷಿಣ, ರಾಜ್‌ಕೋಟ್ ಪೂರ್ವ, ಮೆಹ್ಮೆದಾಬಾದ್ , ಹಿಮತ್‌ನಗರ ಮತ್ತು ಸಾನಂದ್ ಕ್ಷೇತ್ರಗಳನ್ನು ಕಾಂಗ್ರೆಸ್‌ನಿಂದ ಸೆಳೆದುಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ.

 ಇದೇ ರೀತಿ ಅರೆನಗರ ಪ್ರದೇಶಗಳಲ್ಲೂ ಬಿಜೆಪಿಯ ಸಾಧನೆ ಉತ್ತಮವಾಗಿದೆ. ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡ ರದಾದೀಯ ಜಯೇಶ್‌ಭಾಯ್ ಜೇಟ್‌ಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

   ಆದರೆ ಇದಕ್ಕೆ ತದ್ವಿರುದ್ಧವಾಗಿ ಗ್ರಾಮೀಣ ಭಾಗದ ಮತದಾರರು ಈ ಬಾರಿ ಬಿಜೆಪಿಯ ಕೈಬಿಟ್ಟಿರುವುದು ಸ್ಪಷ್ಟವಾಗಿದೆ. ಗ್ರಾಮೀಣ ಭಾಗದಲ್ಲಿರುವ 109 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 61ರಲ್ಲಿ ಗೆಲುವು ಸಾಧಿಸಿದರೆ ಬಿಜೆಪಿ ಕೇವಲ 44 ಹಾಗೂ ಇತರರು 4 ಸ್ಥಾನ ಗೆದ್ದಿದ್ದಾರೆ. ಗ್ರಾಮೀಣ ಭಾಗದಲ್ಲಿ ಭರ್ಜರಿ ಯಶಸ್ಸು ಸಾಧಿಸಿರುವ ಕಾಂಗ್ರೆಸ್ 23 ಸ್ಥಾನಗಳಲ್ಲಿ ಹಾಲಿ ಬಿಜೆಪಿ ಶಾಸಕರಿಗೆ ಸೋಲುಣಿಸಿದ್ದರೆ, ಮೂವರು ಪಕ್ಷೇತರರೂ ಗೆಲುವಿನ ನಗೆ ಬೀರಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಪಾಟಿದಾರ್ ಸಮುದಾಯದವರ ಮತ ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಭಾರೀ ಪೈಪೋಟಿ ನಡೆಸಿದ್ದವು. ಆದರೆ ಪಾಟಿದಾರ್ ಸಮುದಾಯದವರು ನಗರ ಪ್ರದೇಶದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವುದು ಗಮನಾರ್ಹವಾಗಿದೆ.

    ಉತ್ತರ ಗುಜರಾತ್ ಮತ್ತು ಸೌರಾಷ್ಟ್ರ ಕಛ್ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಸಾಧನೆಯನ್ನು ಗಮನಾರ್ಹವಾಗಿ ಸುಧಾರಿಸಿಕೊಂಡಿದ್ದು ಇಲ್ಲಿ ಕ್ರಮವಾಗಿ 17 ಹಾಗೂ 30 ಸ್ಥಾನ ಗೆದ್ದಿದ್ದರೆ ಬಿಜೆಪಿ ಕ್ರಮವಾಗಿ 14 ಹಾಗೂ 23 ಸ್ಥಾನ ಪಡೆದಿದೆ. ಮಧ್ಯ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಬಿಜೆಪಿಗೆ ಮತದಾರರ ಭಾರೀ ಬೆಂಬಲ ದೊರೆತಿರುವುದು ಸ್ಪಷ್ಟವಾಗಿದೆ.

 ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಿರುವ ಬಗ್ಗೆ ಸಂತೃಪ್ತಿ ಸೂಚಿಸಿರುವ ಬಿಜೆಪಿ ನಾಯಕರು ಅಭಿವೃದ್ಧಿಗಾಗಿ ಬೆಂಬಲಿಸಿ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಗುಜರಾತ್ ಜನರು ನೀಡಿದ ಉತ್ತರ ಈ ಫಲಿತಾಂಶವಾಗಿದೆ ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News