ಹೊಸ 500 ರೂ. ನೋಟು ಮುದ್ರಣಕ್ಕೆ 5,000 ರೂ. ಕೋಟಿ ಖರ್ಚು!

Update: 2017-12-18 15:44 GMT

ಹೊಸದಿಲ್ಲಿ, ಡಿ.18: ನೋಟು ಅಮಾನ್ಯೀಕರಣದ ನಂತರ ಪರಿಚಯಿಸಲ್ಪಟ್ಟ ಹೊಸ 500 ರೂ. ಮುಖಬೆಲೆಯ ನೋಟುಗಳ ಮುದ್ರಣಕ್ಕಾಗಿ 5,000 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಕೇಂದ್ರ ಸರಕಾರ ಲೋಕಸಭೆಯಲ್ಲಿ ತಿಳಿಸಿದೆ. ವಿತ್ತ ರಾಜ್ಯ ಸಚಿವ ಪಿ ರಾಧಾಕೃಷ್ಣನ್ ನೀಡಿರುವ ಲಿಖಿತ ಮಾಹಿತಿಯಂತೆ ಡಿಸೆಂಬರ್ 8ರವರೆಗೆ ರೂ. 500 ಮುಖಬೆಲೆಯ 1,695.7 ಕೋಟಿ ನೋಟುಗಳನ್ನು ಮುದ್ರಿಸಲಾಗಿದೆ.

ಈ ನೋಟುಗಳನ್ನು ಮುದ್ರಿಸಲು 4,968.84 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿರುವ ಸಚಿವರು ಆರ್‌ಬಿಐ 2000 ರೂ. ಮುಖಬೆಲೆಯ 365.4 ಕೋಟಿ ನೋಟುಗಳನ್ನು ಮುದ್ರಿಸಿದೆ. ಇದರ ವೆಚ್ಚ 1,293.6 ಕೋಟಿ ರೂ. ಎಂದು ತಿಳಿಸಿದ್ದಾರೆ.

ಇದೇ ರೀತಿ ರೂ. 200 ಮುಖಬೆಲೆಯ 178 ಕೋಟಿ ನೋಟುಗಳನ್ನು ಮುದ್ರಿಸಲು 522.83 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಕರೆನ್ಸಿ ನೋಟುಗಳ ಮುದ್ರಣದ ವೆಚ್ಚ ಹೆಚ್ಚಾಗಿರುವ ಕಾರಣ 2016-17ರಲ್ಲಿ ಆರ್‌ಬಿಐ ಸರಕಾರಕ್ಕೆ ವರ್ಗಾಯಿಸಿದ ಹೆಚ್ಚುವರಿ ಮೊತ್ತವು 35,217 ಕೋಟಿ ರೂ. ಇಳಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

2015-16ರಲ್ಲಿ ಆರ್‌ಬಿಐ ರೂ. 65,876 ಕೋಟಿ ಹೆಚ್ಚುವರಿ ಮೊತ್ತವನ್ನು ಸರಕಾರಕ್ಕೆ ವರ್ಗಾಯಿಸಿತ್ತು. ಈ ಮೊತ್ತ 2016-17ರ ವೇಳೆಗೆ ರೂ. 30,659ಕ್ಕೆ ಕುಸಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News