ದಲಿತ ಪ್ರತಿಭಟನೆಗಳ ಕೇಂದ್ರಬಿಂದುವಾಗಿದ್ದ ಉನಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

Update: 2017-12-18 16:05 GMT

ಅಹ್ಮದಾಬಾದ್,ಡಿ.18: 2016ರಲ್ಲಿ ದಲಿತ ಯುವಕರ ಮೇಲೆ ಸ್ವಘೋಷಿತ ಗೋರಕ್ಷಕರ ದೌರ್ಜನ್ಯದಿಂದಾಗಿ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ಉನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಂಶ ಪುಂಜಾಭಾಯಿ ಭೀಮಭಾಯಿ ಅವರು ಬಿಜೆಪಿ ಅಭ್ಯರ್ಥಿ ಹರಿಭಾಯಿ ಬೋಘಾಭಾಯಿ ಸೋಲಂಕಿ ಅವರ ವಿರುದ್ಧ 4,928 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ಕ್ಷೇತ್ರದಲ್ಲಿ ಒಟು 2,33,303 ಮತದಾರರಿದ್ದಾರೆ.ಚಲಾವಣೆಯಾದ ಮತಗಳ ಪೈಕಿ ಭೀಮಭಾಯಿ ಶೇ.48.56 ಮತ್ತು ಸೋಳಂಕಿ ಶೇ.45.27 ಮತಗಳನ್ನು ಗಳಿಸಿದ್ದಾರೆ.2012ರ ವಿಧಾನ ಸಭಾ ಚುನಾವಣೆಯಲ್ಲಿಯೂ ಕಾಗ್ರೆಸ್ ಈ ಕ್ಷೇತ್ರವನ್ನು ಗೆದ್ದುಕೊಂಡಿತ್ತು.

 2016,ಜು.11ರಂದು ಗೋರಕ್ಷಕರ ತಂಡವೊಂದು ಉನಾದ ನಾಲ್ವರು ಯುವಕರನ್ನು ಬರ್ಬರವಾಗಿ ಥಳಿಸಿತ್ತು. ಚರ್ಮವನ್ನು ಹದಮಾಡುವ ವೃತ್ತಿಯಲ್ಲಿದ್ದ ದಲಿತ ಯುವಕರು ಸತ್ತ ದನವೊಂದರ ಚರ್ಮವನ್ನು ಸುಲಿಯುತ್ತಿದ್ದಾಗ ಗೋಹತ್ಯೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಯು ರಾಜ್ಯವ್ಯಾಪಿ ಗೋರಕ್ಷಕರ ವಿರುದ್ಧ ಭಾರೀ ಪ್ರತಿಭಟನೆಗೆ ನಾಂದಿ ಹಾಡಿತ್ತು ಮತ್ತು ಈಗ ಉನಾ ಕ್ಷೇತ್ರದಲ್ಲಿ ಗೆದ್ದಿರುವ ಜಿಗ್ನೇಶ್ ಮೇವಾನಿಯವರನ್ನು ದಲಿತ ನಾಯಕನ್ನಾಗಿ ರೂಪಿಸಿತ್ತು. ದೌಜ್ನಗಳ ವಿರುದ್ಧ ಉನಾ ದಲಿತರ ಹೋರಾಟ ಸಮಿತಿಯನ್ನು ಸ್ಥಾಪಿಸಿದ್ದ ಮೇವಾನಿ ದಲಿತ ಸಮುದಾಯವನ್ನು ಒಗ್ಗೂಡಿಸಲು ಅಹ್ಮದಾಬಾದ್‌ನಿಂದ ಉನಾವರೆಗೆ 10 ದಿನಗಳ ‘ಚಲೋ ಉನಾ ಜಾಥಾ’ವನ್ನು ನಡೆಸಿದ್ದರು.

ಆತ್ಮಹತ್ಯೆ ಮಾಡಿಕೊಂಡಿದ್ದ ಹೈದರಾಬಾದ್ ವಿವಿಯ ಪಿಎಚ್‌ಡಿ ವಿದ್ಯಾರ್ಥಿ ರೋಹಿತ ವೇಮುಲಾರ ತಾಯಿ ರಾಧಿಕಾ ವೇಮುಲಾ ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News