ಗುಜರಾತ್: ಅಚ್ಚರಿ ಮೂಡಿಸಿದ ‘ನೋಟಾ’ ಮತಗಳ ಪ್ರಮಾಣ

Update: 2017-12-18 17:01 GMT

ಅಹ್ಮದಾಬಾದ್, ಡಿ.18: ಗುಜರಾತ್ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮತದಾರರಿಗೆ ‘ನೋಟ’ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ನಿರೀಕ್ಷೆಗೂ ಮೀರಿ ಜನರು ‘ನೋಟ’ ಅವಕಾಶವನ್ನು ಬಳಸಿಕೊಂಡಿದ್ದಾರೆ.

 ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯಾರಿಗೂ ಮತ ಹಾಕಲು ಇಚ್ಛೆಯಿಲ್ಲದ ಜನರು ‘ನೋಟ’ (ನನ್ ಆಫ್ ದಿ ಎಬವ್- ಈ ಮೇಲಿನವರಲ್ಲಿ ಯಾರೂ ಅಲ್ಲ) ಅವಕಾಶವನ್ನು ಆಯ್ಕೆ ಮಾಡಿಕೊಳ್ಳಬಹುದು. ಗುಜರಾತ್ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಹಾಗೂ ಎನ್‌ಸಿಪಿ(ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ)ದ ಅಭ್ಯರ್ಥಿಗಳು ಪಡೆದಿರುವ ಮತಗಳಿಗಿಂತ ಹೆಚ್ಚಿನ ಮತವನ್ನು ‘ನೋಟ’ ಪಡೆದಿದೆ. ಒಟ್ಟು 5,51,615 ಮತಗಳು ‘ನೋಟ’ಕ್ಕೆ ಚಲಾವಣೆಯಾಗಿವೆ. ಗುಜರಾತ್‌ನಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿ ಸುಮಾರು ಶೇ.49, ಕಾಂಗ್ರೆಸ್ ಶೇ.41.4 ಮತ ಪಡೆದರೆ, ನೋಟ ಶೇ.1.8ರಷ್ಟು ಮತ ಪಡೆದಿರುವುದು ಗಮನಾರ್ಹವಾಗಿದೆ. ಪೋರಬಂದರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ 1,855 ಮತಗಳು. ಆದರೆ ಇಲ್ಲಿ 3,433 ‘ನೋಟ’ ಮತಗಳು ಚಲಾವಣೆಯಾಗಿವೆ.

 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಗುಜರಾತ್‌ನಲ್ಲಿ 4.20 ಲಕ್ಷ ಮತದಾರರು ‘ನೋಟ’ ಗುಂಡಿ ಒತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಗುಜರಾತ್‌ನ ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನಗೊಂಡಿದ್ದವರು, ಕೇಂದ್ರ ಸರಕಾರ ಜಾರಿಗೊಳಿಸಿದ ಜಿಎಸ್‌ಟಿಯಿಂದ ಸಮಸ್ಯೆಗೊಳಗಾದ ಉದ್ಯಮಿಗಳು ಬಿಜೆಪಿ ವಿರುದ್ಧ ಮತ ಚಲಾಯಿಸಲು ‘ನೋಟ’ವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News