ಮಂಗಳೂರಿನಲ್ಲಿ ಸಂಭ್ರಮ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

Update: 2017-12-18 19:27 GMT

ಮಂಗಳೂರು, ಡಿ.19: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಹಿಗ್ಗಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಮಂಗಳೂರಿನಲ್ಲಿ ಸಂಭ್ರಮ ಆಚರಿಸಿದರು.

ಹೊಸದಿಲ್ಲಿಯಿಂದ ವಾಯುಪಡೆಯ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಸುಮಾರು 12:5ಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯನ್ನು  ಕೇಂದ್ರ ನೌಕಾಯಾನ ರಾಜ್ಯ ಸಚಿವ ಪಿ. ರಾಧಾಕೃಷ್ಣನ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ್ ಪುಜಾರಿ, ಎಸ್. ಅಂಗಾರ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರಧಾನಿಯನ್ನು ಸ್ವಾಗತಿಸಿ, ಬರಮಾಡಿಕೊಂಡರು.

ನಂತರ ಪ್ರಧಾನಿ ಮೋದಿ ಕೈ ಬೀಸಿ ಹರ್ಷ ವ್ಯಕ್ತಪಡಿಸಿ, ಸಂಭ್ರಮಾಚರಿಸಿದರು. ಅವರು ನಗರದ ಸರ್ಕ್ಯೂಟ್ ಹೌಸ್‌ನ ಹೊಸ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಲ್ಲೇ ಪ್ರಧಾನಿಯ ತಾತ್ಕಾಲಿಕ ಕಚೇರಿಯನ್ನು ನಿರ್ಮಿಸಲಾಗಿದ್ದು, ಅದಕ್ಕೆ ಕಂಪ್ಯೂಟರ್, ಕ್ಯಾಮರಾ, ಪ್ರಿಂಟರ್ ಅಳವಡಿಸಿ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ.

ಭದ್ರತೆಯ ದೃಷ್ಟಿಯಿಂದ ರವಿವಾರದವರೆಗೂ ಪ್ರಧಾನಿಯ ಭೇಟಿಯನ್ನು ಗೌಪ್ಯವಾಗಿಟ್ಟಿದ್ದ ಸ್ಥಳೀಯ ಬಿಜೆಪಿ ಮುಖಂಡರು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಬಜ್ಪೆ ಕೆಂಜಾರು ವಿಮಾನ ನಿಲ್ದಾಣದ ಬಳಿ ಸಂಭ್ರಮ ಆಚರಿಸಲು ನಿರ್ಧರಿಸಿ ಸಕಲ ವ್ಯವಸ್ಥೆ ಏರ್ಪಡಿಸಿದ್ದರು.

ತೀವ್ರ ತಪಾಸಣೆ: ರವಿವಾರದಿಂದಲೇ ನಗರದ ಎಲ್ಲೆಡೆ ಬಿಗು ತಪಾಸಣೆ ನಡೆಸಿರುವ ಪೊಲೀಸರು ಸೋಮವಾರವೂ ನಗರದ ಲಾಡ್ಜ್‌ಗಳ ಹಾಗೂ ವಾಹನಗಳ ತಪಾಸಣೆ ನಡೆಸಿದ್ದರು. ಸರ್ಕ್ಯೂಟ್ ಹೌಸ್ ಆಸುಪಾಸಿನ ಅಂಗಡಿಮುಂಗಟ್ಟುಗಳನ್ನು ಸೋಮವಾರ ಅಪರಾಹ್ನದಿಂದಲೇ ಮುಚ್ಚಿಸಿದ್ದರು.

ಬಜ್ಪೆ- ಮಂಗಳೂರು ಮಧ್ಯೆ ಸುಮಾರು 180 ಹೆಲೋಜನ್ ಲೈಟ್, 60 ಸಿಸಿ ಕ್ಯಾಮೆರಾ ಅಳವಡಿಕೆ, 1 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜಿಸಲಾಗಿತ್ತು. ಹಿರಿಯ ಅಧಿಕಾರಿಗಳು ಭದ್ರತೆಯ ಹೊಣೆ ಹೊತ್ತಿದ್ದರು.

ಸ್ಥಳದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಎಡಿಜಿಪಿ ಕಮಲ್ ಪಂತ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಡಿ.19ರಂದು ಬೆಳಗ್ಗೆ ಸುಮಾರು 7:30ಕ್ಕೆ ವಿಶೇಷ ವಿಮಾನದಲ್ಲಿ ಮೂಲಕ ಕೊಚ್ಚಿಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಒಖಿ ಚಂಡಮಾರುತದಿಂದ ಹಾನಿಯುಂಟಾದ ಪ್ರದೇಶಗಳಿಗೆ ತೆರಳಲಿ ಸಂತ್ರಸ್ತರಿಗೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಅವರು ಲಕ್ಷದ್ವೀಪ ಮತ್ತು ತಮಿಳುನಾಡಿಗೂ ಭೇಟಿ ನೀಡಲಿದ್ದಾರೆ.

ಮಂಗಳೂರಿನಲ್ಲಿ ತಂಗಿದ ಮೂರನೆ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ನಗರದ ಸರ್ಕ್ಯೂಟ್ ಹೌಸ್‌ನ ಹೊಸ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡುವುದರೊಂದಿಗೆ ಮಂಗಳೂರಿನಲ್ಲಿ ತಂಗಿದ್ದ ಮೂರನೆ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾದರು.

1957ರಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೇರಳದ ಕಣ್ಣೂರಿಗೆ ತೆರಳುವ ಸಂದರ್ಭ ಹಿರಿಯ ಕಾಂಗ್ರೆಸ್ ನಾಯಕಿ ಒಕ್ಟೋವಿಯಾ ಆಲ್ಬುಕರ್ಕ್‌ರ ಮನೆಯಲ್ಲಿ ತಂಗಿದ್ದರು. ಬಳಿಕ ಮತ್ತೊಮ್ಮೆ ಆಗಮಿಸಿದಾಗ ನಗರದ ಗಜಾನನ ರಾವ್ ಪಂಡಿತ್‌ರ ಮನೆಯಲ್ಲಿ ತಂಗಿದ್ದರು.

1971ರಲ್ಲಿ ದೇಶದ ಮೂರನೆ ಪ್ರಧಾನಿ ಇಂದಿರಾ ಗಾಂಧಿ ಹೊಸ ಜನಾದೇಶ ಪಡೆಯುವ ಸಲುವಾಗಿ ದೇಶಾದ್ಯಂತ ಸಂಚರಿಸಿ ಮಂಗಳೂರಿಗೂ ಆಗಮಿಸಿ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News