ನೀವೇಕೆ ಆರೋಗ್ಯ ವಿಮೆಯನ್ನು ಮಾಡಿಸಬೇಕು....?

Update: 2017-12-20 12:25 GMT

ವೈದ್ಯಕೀಯ ವೆಚ್ಚಗಳು ದಿನೇದಿನೇ ಹೆಚ್ಚುತ್ತಿದ್ದು,ಗಂಭೀರ ಕಾಯಿಲೆಯಿಂದ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಬಿಲ್ ಪಾವತಿಸುವುದು ಅವರ ಕುಟುಂಬಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ ಪಾಲಿಸಿಗಳ ಖರೀದಿಯು ಈಗ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಇಂತಹ ಪಾಲಿಸಿಗಳು ರೋಗಿಗಳ ಎಲ್ಲ ಆಸ್ಪತ್ರೆ ಖರ್ಚುಗಳು, ಆಸ್ಪತ್ರೆಗೆ ದಾಖಲಾಗುವ ಮೊದಲಿನ ಮತ್ತು ನಂತರದ ವೆಚ್ಚಗಳನ್ನು ಭರಿಸುತ್ತವೆ. ಆರೋಗ್ಯ ವಿಮೆ ಯೋಜನೆಗಳನ್ನು ಖರೀದಿಸುವು ದರಿಂದ ದೊರೆಯುವ ಪ್ರಮುಖ ಪ್ರಯೋಜನಗಳ ಮಾಹಿತಿಗಳು ಇಲ್ಲಿವೆ....

ನಮ್ಮ ದುಡ್ಡು ಖರ್ಚಾಗದೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ಆರೋಗ್ಯ ವಿಮೆಯ ಮುಖ್ಯ ಉದ್ದೇಶವಾಗಿದೆ. ಆರೋಗ್ಯ ವಿಮೆ ಯೋಜನೆಗಳು ಅಧಿಕ ವೈದ್ಯಕೀಯ ವೆಚ್ಚಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಅದು ಆಸ್ಪತ್ರೆ ವೆಚ್ಚಗಳು, ಮನೆಯಲ್ಲಿ ರೋಗಿಗಳ ಚಿಕಿತ್ಸಾ ವೆಚ್ಚಗಳು, ಆ್ಯಂಬುಲನ್ಸ್ ಶುಲ್ಕಗಳ ಜೊತೆಗೆ ಇತರ ಹಲವಾರು ವೆಚ್ಚಗಳನ್ನೂ ಒಳಗೊಂಡಿರುತ್ತವೆ.

ಅರೋಗ್ಯ ವಿಮೆ ಕಂಪನಿಗಳು ಈಗ ಗಂಭೀರ ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನೂ ಭರಿಸುತ್ತಿವೆ. ಗಂಭೀರ ಕಾಯಿಲೆಗಳಿಗಾಗಿಯೇ ವಿಶೇಷ ಪಾಲಿಸಿಗಳಿವೆ ಅಥವಾ ಇತರ ಪಾಲಿಸಿಗಳಲ್ಲಿ ಷರತ್ತುಗಳೊಡನೆ ಈ ಸೌಲಭ್ಯ ದೊರೆಯುತ್ತದೆ. ಇಂತಹ ಪಾಲಿಸಿಗಳು ಮಾರಣಾಂತಿಕವಾದ ಮೂತ್ರಪಿಂಡಗಳ ವೈಫಲ್ಯ, ಅಸ್ಥಿಮಜ್ಜೆ ಕಸಿ, ಮಿದುಳಿನ ಆಘಾತ, ಪಾರ್ಶ್ವವಾಯು, ಕೈಕಾಲುಗಳ ನಷ್ಟ ಇತ್ಯಾದಿಗಳ ವೈದ್ಯಕೀಯ ವೆಚ್ಚಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ಪೂರ್ವ ನಿರ್ಧರಿತ ಪಟ್ಟಿಯಲ್ಲಿನ ಯಾವುದೇ ರೋಗಕ್ಕೆ ಪಾಲಿಸಿದಾರನು ತುತ್ತಾದರೆ ಆತ ಒಂದು ನಿರ್ದಿಷ್ಟ ಮೊತ್ತವನ್ನು ಪಡೆಯಲು ಅರ್ಹ ನಾಗಿರುತ್ತಾನೆ ಮತ್ತು ಈ ಮೊತ್ತವನ್ನು ಚಿಕಿತ್ಸಾ ವೆಚ್ಚಗಳು, ದೈನಂದಿನ ಖರ್ಚುಗಳು ಮತ್ತು ಇತರ ಹಣಕಾಸಿನ ಬಾಧ್ಯತೆಗಳಿಗಾಗಿ ಬಳಸಬಹುದಾಗಿದೆ.

ಹೆಚ್ಚಿನ ಆರೋಗ್ಯ ವಿಮೆ ಕಂಪನಿಗಳು ತಾವು ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆ ಗಳಲ್ಲಿ ನಗದುರಹಿತ ಚಿಕಿತ್ಸೆಯ ಸೌಲಭ್ಯವನ್ನು ನೀಡುತ್ತಿವೆ. ಹೀಗಾಗಿ ಆಸ್ಪತ್ರೆಗೆ ದಾಖಲಾ ಗುವ ರೋಗಿಗಳು ಯಾವುದೇ ಹಣವನ್ನು ನೀಡಬೇಕಿಲ್ಲ. ನಿಮ್ಮ ಆಸ್ಪತ್ರೆ ವಾಸದ ಖರ್ಚುವೆಚ್ಚಗಳನ್ನು ವಿಮೆ ಕಂಪನಿ ಮತ್ತು ಆಸ್ಪತ್ರೆ ಇತ್ಯರ್ಥಗೊಳಿಸಿಕೊಳ್ಳುತ್ತವೆ. ಈ ಸೌಲಭ್ಯದ ಲಾಭವನ್ನು ಪಡೆಯಲು ವಿಮೆ ಕಂಪನಿಯ ಜಾಲದಲ್ಲಿರುವ ಆಸ್ಪತ್ರೆಗಳಿಗೆ ದಾಖಲಾಗುವುದು ಕಡ್ಡಾಯವಾಗಿದೆ.

ಹಲವಾರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗಾಗಿ ಗುಂಪು ಆರೋಗ್ಯ ವಿಮೆ ಯೋಜನೆಗಳನ್ನು ಮಾಡಿಸಿರುತ್ತವೆ. ಆದರೆ ಇಂತಹ ಪಾಲಿಸಿಗಳು ವ್ಯಕ್ತಿಗತ ಅಗತ್ಯಗಳಿಗಾಗಿ ರೂಪುಗೊಂಡಿರುವುದಿಲ್ಲ. ಅಲ್ಲದೆ ಉದ್ಯೋಗ ನಷ್ಟ ಅಥವಾ ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ನಿಮಗೆ ಈ ವಿಮೆಯ ರಕ್ಷಣೆ ದೊರೆಯುವುದಿಲ್ಲ. ಈ ಅಪಾಯದ ವಿರುದ್ಧ ರಕ್ಷಣೆ ಪಡೆಯಲು ವೈಯಕ್ತಿಕವಾಗಿ ಆರೋಗ್ಯ ವಿಮೆ ಪಾಲಿಸಿಯನ್ನು ಖರೀದಿಸುವುದು ಒಳ್ಳೆಯದು.

ಆರೋಗ್ಯ ವಿಮೆಯು ತೆರಿಗೆ ಲಾಭಗಳನ್ನೂ ನೀಡುತ್ತದೆ. ಈ ಪಾಲಿಸಿಗಾಗಿ ನೀವು ಪಾವತಿಸುವ ಪ್ರೀಮಿಯಂ ಮೊತ್ತವು ಆದಾಯ ತೆರಿಗೆ ಕಾಯ್ದೆಯ ಕಲಂ 80ಡಿ ಅಡಿ ಕಡಿತಕ್ಕೆ ಅರ್ಹವಾಗಿರುತ್ತದೆ. ನೀವು 60 ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದರೆ ನಿಮಗೆ, ನಿಮ್ಮ ಪತ್ನಿ ಅಥವಾ ಪತಿ ಮತ್ತು ಅವಲಂಬಿತ ಮಕ್ಕಳಿಗಾಗಿ ಆರೋಗ್ಯ ವಿಮೆ ಪ್ರೀಮಿಯಂ ಮೇಲೆ 25,000 ರೂ.ಗಳ ಮತ್ತು ನಿಮ್ಮ ಹೆತ್ತವರಿಗಾಗಿ ಹೆಚ್ಚುವರಿ 25,000 ರೂ.ಗಳ ತೆರಿಗೆ ಲಾಭಗಳನ್ನು ಪಡೆಯುತ್ತೀರಿ. ನಿಮ್ಮ ಹೆತ್ತವರಲ್ಲಿ ಒಬ್ಬರು ಹಿರಿಯ ನಾಗರಿಕರಾಗಿದ್ದಲ್ಲಿ ನೀವು 30,000 ರೂ.ವರೆಗೆ ತೆರಿಗೆ ಲಾಭಗಳನ್ನು ಪಡೆಯಲು ಅರ್ಹರಾಗಿರುತ್ತೀರಿ.

ನೀವು ಈ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಯಲ್ಲಿ ಲಭ್ಯವಿರುವ ಆರೋಗ್ಯ ವಿಮೆ ಪಾಲಿಸಿಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳ ಬಹುದಾಗಿದೆ. ನಿಮ್ಮ ವೈಯಕ್ತಿಕ ಅಗತ್ಯಗಳನ್ನು ಆಧರಿಸಿ ಅತ್ಯುತ್ತಮವಾದ ಯೋಜನೆ ಯನ್ನೇ ಆಯ್ಕೆ ಮಾಡಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News