ಬುಡುಕಟ್ಟು ಮಹಿಳೆಯರ ನಗ್ನ ಪ್ರತಿಭಟನೆ : ತನಿಖೆಗೆ ಜಾರ್ಖಂಡ್ ಸರಕಾರ ಆದೇಶ
ಪಾಟ್ನಾ, ಡಿ. 21: ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಕೆಲವು ಬುಡಕಟ್ಟು ಮಹಿಳೆಯರು ನಗ್ನರಾಗಿ ಪ್ರತಿಭಟನೆ ನಡೆಸಿದ್ದಾರೆ ಹಾಗೂ ಛಾಯಾಚಿತ್ರಗಳನ್ನು ತೆಗೆಯಲು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತನಿಖೆಗೆ ಆದೇಶಿಸಿದೆ.
ಮಧ್ಯ ವಯಸ್ಸಿನ ಮಹಿಳೆಯರು ಕುತ್ತಿಗೆಯಲ್ಲಿ ಪ್ಲೇ ಕಾರ್ಡ್‌ಗಳನ್ನು ಹೊರತುಪಡಿಸಿ ಉಳಿದಂತೆ ನಗ್ನರಾಗಿ ಪ್ರತಿಭಟನೆ ನಡೆಸುತ್ತಿದ್ದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಬೇಡಿಕೆಯ ಜ್ಞಾಪನಾ ಪತ್ರವನ್ನು ಈ ಫೋಟೊಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಜಾರ್ಖಂಡ್ ಮುಖ್ಯಮಂತ್ರಿ ರಘುವರ ದಾಸ್ ಹಾಗೂ ರಾಜ್ಯಪಾಲ ದ್ರೌಪದಿ ಮರ್ಮು ಸೇರಿದಂತೆ ಹಲವು ಗಣ್ಯರಿಗೆ ಕಳುಹಿಸಲಾಗಿತ್ತು.
ಯೋಜನೆ ನಿರಾಶ್ರಿತರಿಗೆ ಉದ್ಯೋಗ ನಿರಾಕರಿಸಲಾಗಿದೆ ಎಂದ ಆರೋಪಿಸಿ ಜಾರ್ಖಂಡ್ ಹಾಗೂ ಪಶ್ಚಿಮಬಂಗಾಳ ಜಲ ಹಾಗೂ ಉಷ್ಣ ವಿದ್ಯುತ್ ಸ್ಥಾವರನ್ನು ನಿರ್ವಹಿಸುತ್ತಿರುವ ದಾಮೋದರ್ ವ್ಯಾಲಿ ಕಾರ್ಪೊರೇಶನ್ ವಿರುದ್ಧ ಆದಿವಾಸಿ ಘಟ್ವಾರ ಮಹಾಸಭಾ (ಎಜಿಎಂ) ಈ ಪ್ರತಿಭಟನೆ ಆಯೋಜಿಸಿತ್ತು.
ನಿರ್ವಸಿತರ ಸಂಕಷ್ಟವನ್ನು ಸರಕಾರದ ಗಮನಕ್ಕೆ ತರಲು ಪ್ರತಿಭಟನೆ ಆಯೋಜಿಸಿದ್ದ ಎಜಿಎಂ ನಾಯಕ ರಾಮಶ್ರೆ ಸಿಂಗ್ ಈ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಕ್ಷಮೆ ಕೋರಿ, ಫೋಟೊ ತೆಗೆದಿದ್ದರು.