ಸೃಷ್ಟಿ ಮಾಡಿದವರನ್ನೇ ಸುಡಲು ಹೊರಟಿರುವ ಭಸ್ಮಾಸುರ!

Update: 2017-12-21 18:09 GMT

ಮಾನ್ಯರೇ,

ಸಂಘ ಪರಿವಾರದವರೇ ಮಾತು ಮಾತಿಗೆ ‘‘ಕಾಂಗ್ರೆಸ್‌ನವರು ಕಳೆದ 60 ವರ್ಷಗಳಲ್ಲಿ ಏನು ಮಾಡಿದ್ದಾರೆ’’ ಎಂದು ಕೇಳುತ್ತಿದ್ದಾರೆ. ನೀವು ಇನ್ನು ಈ ಮಾತು ಹೇಳಬಾರದು. ಈಗ ನಿಮ್ಮ ಪಕ್ಷದ ಸತತ ಗೆಲುವಿಗೆ ನೆರವಾಗುತ್ತಿರುವ ಮತಯಂತ್ರವನ್ನು ಜಾರಿಗೆ ತಂದವರು ಕಾಂಗ್ರೆಸ್‌ನವರೇ ತಾನೇ. ಈ ಮತಯಂತ್ರ ಇರದಿದ್ದರೆ ನೀವು ಎಂದಾದರೂ ಹೀಗೆ ಸತತವಾಗಿ ಗೆಲ್ಲುವುದು ಸಾಧ್ಯವಿತ್ತೇ? ಇವಿಎಂ ಎಂಬ ಮತಯಂತ್ರಾಸುರನನ್ನು ಹುಟ್ಟುಹಾಕಿ ಬಿಜೆಪಿಯಂತಹ ಶುಕ್ರಾಚಾರ್ಯರ ಕೈಯಲ್ಲಿ ಇಟ್ಟಿದ್ದು ಇದೇ ಕಾಂಗ್ರೆಸ್ ಅಲ್ಲವೇ! ಕಾಂಗ್ರೆಸ್ ಸರಕಾರ ಕಳೆದ 60 ವರ್ಷಗಳಲ್ಲಿ ಮಾಡಿದ ನೈಜ ಅಭಿವೃದ್ಧಿಯ ವಿವರವನ್ನು ಈಗಾಗಲೇ ಸ್ವತಃ ಬಿಜೆಪಿ ಸರಕಾರದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ರವರೇ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಆದರೆ ಕಾಂಗ್ರೆಸ್ ಆಡಳಿತದಲ್ಲಿ ಇಲೆಕ್ಟ್ರಾನಿಕ್‌ಕ್ಷೇತ್ರದ ಅಭಿವೃದ್ಧಿಗೆ ಎಷ್ಟೊಂದು ಪ್ರಾಮುಖ್ಯತೆ ಕೊಟ್ಟರೆಂದರೆ ಅವರು ಚುನಾವಣೆಯಲ್ಲಿ ಇವಿಎಂ ಅರ್ಥಾತ್ ಇಲೆಕ್ಟ್ರಾನಿಕ್ ಮತಯಂತ್ರವನ್ನೂ ಉತ್ಸಾಹದಿಂದ ಜಾರಿಗೆ ತಂದು ಬಿಟ್ಟರು. ಆದರೆ ಅದು ಸಿಗಬಾರದವರ ಕೈಯಲ್ಲಿ ಸಿಕ್ಕಿ ದೇಶದ ಪ್ರಜಾಪ್ರಭುತ್ವವೇ ನಾಶವಾಗುವ ಹಂತಕ್ಕೆ ಬರುತ್ತದೆ ಎಂದು ಆಗಿನ ಕಾಂಗ್ರೆಸ್ ಸರಕಾರ ಊಹಿಸಿರಲಿಕ್ಕಿಲ್ಲ. ಮತಯಂತ್ರಾಸುರನ ಸೃಷ್ಟಿಯನ್ನು ಕಾಂಗ್ರೆಸ್‌ನವರು ಒಳ್ಳೆಯ ಉದ್ದೇಶದಿಂದಲೇ ಮಾಡಿದ್ದರು ನಿಜ, ಆದರೆ ಈಗ ಆ ಭಸ್ಮಾಸುರ ತನ್ನನ್ನು ಸೃಷ್ಟಿ ಮಾಡಿದವರನ್ನೇ ಸುಡಲು ಹೊರಟಿದ್ದಾನೆ. ಗುಜರಾತಿನ ಸೂರತ್ ನಗರದಲ್ಲಿ ಬಿಜೆಪಿಯ ವಿರುದ್ಧ ಜನರಿಗೆ ಎಷ್ಟು ಸಿಟ್ಟಿತ್ತೆಂದರೆ ಅಲ್ಲಿ ಪ್ರಚಾರಕ್ಕೆ ಬಂದ ಬಿಜೆಪಿ ಕಾರ್ಯಕರ್ತರನ್ನು ಅಲ್ಲಿಂದ ಓಡಿಸಿದ್ದರು. ಆದರೆ ಈಗ ಫಲಿತಾಂಶ ಬಂದಾಗ ಸೂರತ್ ನಗರದಲ್ಲಿಯ ಒಟ್ಟು 16ರಲ್ಲಿ ಬಿಜೆಪಿಗೆ 15 ಸ್ಥಾನಗಳು ಸಿಕ್ಕಿದೆ.

ಇದು ಮತಯಂತ್ರ ದುರ್ಬಳಕೆಯಿಂದ ಮಾತ್ರ ಸಾಧ್ಯವಲ್ಲದೇ ಬೇರೆ ರೀತಿಯಿಂದ ಸಾಧ್ಯವೇ ಇಲ್ಲ. ವಿವಿಪ್ಯಾಟ್ ಮತಚೀಟಿಯ ಎಣಿಕೆಯಿಂದ ಇದರ ಗುಟ್ಟು ಬಹಿರಂಗವಾಗಬಹುದು. ಆದರೆ ಮತಯಂತ್ರದ ಚಿಪ್ ತಯಾರಿಸುವ ಅಮೆರಿಕದ ಜಿಯೋ ಗ್ಲೋಬಲ್ ಕಂಪೆನಿಗೆ ಗುಜರಾತ್ ಪೆಟ್ರೋಲಿಯಂ ಕಂಪೆನಿ ಮೂಲಕ ಇಪ್ಪತ್ತು ಸಾವಿರ ಕೋಟಿ ರೂಪಾಯಿಯನ್ನು ಸ್ವತಃ ಧಾರೆ ಎರೆದ ಅಚಲ್ ಕುಮಾರ್ ಜ್ಯೋತಿ ಎಂಬ ಮೋದಿಯವರ ಬಲಗೈ ಬಂಟನೇ ಮುಖ್ಯ ಚುನಾವಣಾ ಆಯುಕ್ತನಾಗಿ ವಿವಿಪ್ಯಾಟ್‌ಗೆ ಘಟಸರ್ಪದಂತೆ ಕುಂಡಲಿ ಹಾಕಿ ಕುಳಿತಿರುವಾಗ ಮತ್ತು ಸುಪ್ರೀಂ ಕೋರ್ಟಿನಲ್ಲಿ ಸಂಘಪರಿವಾರದ ವ್ಯಕ್ತಿಗಳೇ ನ್ಯಾಯಸ್ಥಾನದಲ್ಲಿರುವಾಗ ಮತಯಂತ್ರಗಳ ಗುಟ್ಟು ಹೊರಬರಲು ಸಾಧ್ಯವೇ? ನಮ್ಮ ದೇಶದ ಪ್ರಜಾಪ್ರಭುತ್ವ ಈಗ ತುಂಬಾ ಕಠಿಣ ಪರೀಕ್ಷೆಗೆ ಒಳಗಾಗಿದೆ. ಅದು ಉಳಿಯುತ್ತೋ ಇಲ್ಲವೋ ಕಾಲವೇ ಹೇಳಬಲ್ಲುದು! ಮತಯಂತ್ರವೆಂಬ ಭಸ್ಮಾಸುರನನ್ನು ಸೃಷ್ಟಿಸಿದ ಕಾಂಗ್ರೆಸ್‌ಗಂತೂ ಉಳಿಗಾಲವಿದ್ದಂತೆ ಕಾಣುತ್ತಿಲ್ಲ.

-ಜಿ. ರವಿಕಿರಣ ರೈ, ಕೋಟೆಕಾರ್, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News