×
Ad

ಕಾಮಾಂಧರಿಗೆ ಶಿಕ್ಷೆಯಾಗಲಿ

Update: 2017-12-21 23:40 IST

ಮಾನ್ಯರೇ,

ವಿಜಯಪುರ ಜಿಲ್ಲೆಯಲ್ಲಿ ಡಿ.19 ರಂದು ಶಾಲೆ ಮುಗಿಸಿ ಗೆಳತಿಯೊಂದಿಗೆ ಮನೆಗೆ ತೆರಳುತಿದ್ದ ದಲಿತ ಸಮುದಾಯಕ್ಕೆ ಸೇರಿದ 15 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಆರೇಳು ಜನ ಕಾಮುಕರ ಗುಂಪೊಂದು ಬೈಕ್‌ನಲ್ಲಿ ಅಪಹರಿಸಿ, ಮನೆಯೊಂದರಲ್ಲಿ ಸಾಮೂಹಿಕವಾಗಿ ಅತ್ಯಾಚಾರವೆಸಗಿ ನಂತರ ಕತ್ತು ಹಿಸುಕಿ ಕೊಲೆ ಗೈದು ಅಟ್ಟಹಾಸ ಮೆರೆದಿದೆೆ. ಈ ಅಮಾನವೀಯ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಈ ಹೃದಯ ವಿದ್ರಾವಕ ಘಟನೆಯು ದಿಲ್ಲಿಯ ನಿರ್ಭಯಾ ಪ್ರಕರಣದಂತೆ ಭಯಾನಕವಾಗಿದ್ದು ರಾಜ್ಯಕ್ಕೆ ಈ ಘಟನೆ ಒಂದು ಕಪ್ಪುಚುಕ್ಕೆಯಾಗಿದೆ. ಇದು ಖಂಡನೀಯ.

ಬಸವ ಭೂಮಿ ಶರಣರ ಜಿಲ್ಲೆ ಎಂದು ಕರೆಸಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಅತ್ಯಾಚಾರ, ಅನಾಚಾರ, ಜನಾಂಗೀಯ ದೌರ್ಜನ್ಯಗಳು, ಮರ್ಯಾದಾ ಹತ್ಯೆಗಳು, ಕೊಲೆ, ದರೋಡೆ, ಅಸ್ಪೃಶ್ಯತೆ ಆಚರಣೆ ಹಾಗೂ ದಲಿತರ ಮೇಲೆ ದೌರ್ಜನ್ಯ, ಜಾತಿ ನಿಂದನೆ ಮತ್ತು ಬಹಿಷ್ಕಾರದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿದೆ. ಇದು ನಿಜಕ್ಕೂ ವಿಷಾದಕರ.

ಆದ್ದರಿಂದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ದುಷ್ಕೃತ್ಯವೆಸಗಿರುವ ಕಾಮಾಂಧರನ್ನು ಶೀಘ್ರವಾಗಿ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ ಸಮಾಜ ತಲೆ ತಗ್ಗಿಸುವಂತಹ ಅಮಾನವೀಯ ಹೇಯ ಕೃತ್ಯಗಳು ಮರುಕಳಿಸದಂತೆ ಸರಕಾರ ಕಠಿಣ ಕಾನೂನು ರೂಪಿಸಬೇಕಿದೆ.

ಮೌಲಾಲಿ ಕೆ. ಬೋರಗಿ, ಸಿಂದಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News