ಡಿ.26: ಮಂಗಳೂರಿನ ಪುರಭವನದಲ್ಲಿ ‘ಬ್ಯಾರಿ ಸಾಂಸ್ಕೃತಿಕ ಸಂಭ್ರಮ’

Update: 2017-12-23 13:33 GMT

ಮಂಗಳೂರು, ಡಿ.23: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಡಿ.26ರಂದು ಬೆಳಗ್ಗೆ 10 ಗಂಟೆಗೆ ನಗರದ ಪುರಭವನದಲ್ಲಿ ಬ್ಯಾರಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ಕರಂಬಾರು ಮುಹಮ್ಮದ್ ಹೇಳಿದ್ದಾರೆ.

 ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು. ಸಚಿವರಾದ ಉಮಾಶ್ರೀ, ಯು.ಟಿ. ಖಾದರ್, ಆರ್. ರೋಶನ್ ಬೇಗ್, ಮಾಜಿ ಸಚಿವ ಬಿ.ಎ. ಮೊಹಿದಿನ್, ಶಾಸಕರಾದ ಜೆ.ಆರ್. ಲೋಬೊ, ಕೆ. ಅಭಯಚಂದ್ರ ಜೈನ್, ಐವನ್ ಡಿಸೋಜ, ಶಕುಂತಳಾ ಟಿ. ಶೆಟ್ಟಿ, ಬಿ.ಎ. ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್, ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಮುಡಾ ಅಧ್ಯಕ್ಷ ಕೆ. ಸುರೇಶ್ ಬಲ್ಲಾಳ್, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಕೊಂಕಣಿ ಅಕಾಡಮಿ ಅಧ್ಯಕ್ಷ ಆರ್.ಪಿ. ನಾಯ್ಕ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ. ಮೋನು, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಬಿ.ಎಂ. ಫಾರೂಕ್, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎ. ಹಸನಬ್ಬ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಅಕಾಡಮಿಯ ಮಾಜಿ ಅಧ್ಯಕ್ಷರಾದ ಎಂ.ಬಿ. ಅಬ್ದುಲ್ ರಹ್ಮಾನ್, ರಹೀಂ ಉಚ್ಚಿಲ್, ಬಿ.ಎ. ಮುಹಮ್ಮದ್ ಹನೀಫ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ. ಮಹಮ್ಮದಲಿ, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಯು.ಎಚ್. ಉಮರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಬೆಳಗ್ಗೆ 10ರಿಂದ 11ರವರೆಗೆ ಇಬ್ರಾಹೀಂ ಬಾತಿಷಾ ನೇತೃತ್ವದಲ್ಲಿ ಬ್ಯಾರಿ ಸಾಹಿತ್ಯ ಮತ್ತು ಸಂಗೀತ ಸಂಗಮ ಹಾಗೂ ಅಪರಾಹ್ನ 2ರಿಂದ 4ರವರೆಗೆ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಬ್ಯಾರಿ ಭವನ ನಿರ್ಮಾಣಕ್ಕೆ ಆದ್ಯತೆ: ನಗರ ಹೊರವಲಯದ ನೀರುಮಾರ್ಗ ಸಮೀಪದ ಬೈತುರ್ಲಿಯಲ್ಲಿ ಅಕಾಡಮಿ ಖರೀದಿಸಿರುವ ಜಾಗದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ 8 ಕೋ. ರೂ. ಮೊತ್ತದ ಅಂದಾಜುಪಟ್ಟಿ ತಯಾರಿಸಿ, ವಿಶೇಷ ಅನುದಾನ ಅಥವಾ ಮುಂದಿನ ಬಜೆಟ್‌ನಲ್ಲಿ ಘೋಷಿಸಿ ಬಿಡುಗಡೆ ಮಾಡಿಸಲು ಹಾಗೂ ಈಗಾಗಲೇ ಘೋಷಿಸಲಾದ ಬ್ಯಾರಿ ಪೀಠವನ್ನು ಮಂಗಳೂರು ವಿವಿಯಲ್ಲಿ ಕಾರ್ಯಾರಂಭಕ್ಕೆ ಅನುದಾನ ಬಿಡುಗಡೆ ಮಾಡಿಸಲು ಸಿಎಂ ಬಳಿಗೆ ನಿಯೋಗ ತೆರಳಲಾಗುವುದು ಎಂದು ಮುಹಮ್ಮದ್ ಕರಂಬಾರು ಹೇಳಿದರು.

ಹಿಂದಿನ ಅವಧಿಯಲ್ಲಿ ಅಕಾಡಮಿ ಪ್ರಕಸಿರುವ ಬ್ಯಾರಿ ನಿಘಂಟು ಮತ್ತು ಇತರ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಶಾಲೆಗಳು ಹಾಗೂ ಗ್ರಂಥಾಲಯಗಳಿಗೆ ತಲುಪಿಸಲಾಗುವುದು. ರಾಜ್ಯದ ಮೂಲೆಗಳಿಗೆ ಬ್ಯಾರಿ ಭಾಷೆಯ ಸಾಹಿತ್ಯ, ಸಂಸ್ಕೃತಿಯ ಸೊಗಡು ತಲುಪಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

 ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸದಸ್ಯರಾದ ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ, ಬಶೀರ್ ಅಹ್ಮದ್ ಕಿನ್ಯ, ಪಿ.ಎಂ. ಹಸನಬ್ಬ ಮೂಡುಬಿದಿರೆ, ಮುಹಮ್ಮದ್ ಆರಿಫ್ ಪಡುಬಿದ್ರೆ, ಆಯಿಶಾ ಯು.ಕೆ ಉಳ್ಳಾಲ, ಕೆ.ಎಂ. ಮುಹಮ್ಮದ್ ಅನ್ಸಾರ್ ಬೆಳ್ಳಾರೆ, ಮುಹಮ್ಮದ್ ತನ್ಸೀಫ್ ಕಿಲ್ಲೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News