ದಲಿತ ಬಾಲಕಿ ಅತ್ಯಾಚಾರ-ಹತ್ಯೆ ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಧರಣಿ

Update: 2017-12-23 10:19 GMT

ಮಂಗಳೂರು, ಡಿ.23: ವಿಜಯಪುರದಲ್ಲಿ 9ನೆ ತರಗತಿಯ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣವನ್ನು ಖಂಡಿಸಿ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಒ) ಮಂಗಳೂರು ಶಾಖೆಯ ವತಿಯಿಂದ ಶನಿವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ನಡೆಸಲಾಯಿತು.

ಎಸ್‌ಐಒ ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಕ್ಕೆ ಮಾದಕ ವ್ಯಸನ ಕಾರಣವಾಗಿದೆ. ದೇಶದಲ್ಲಿ ಮಾದಕ ಪದಾರ್ಥಗಳನ್ನು ನಿಷೇಧಿಸಲು ಸರಕಾರಗಳು ವಿಫಲವಾಗಿವೆ. ಅಮಲು ಪದಾರ್ಥಗಳ ದಾಸರಾಗುತ್ತಿರುವ ಯುವ ಜನತೆಯಿಂದಾಗಿ ಇಂತಹ ದುಷ್ಕೃತ್ಯಗಳು ಹೆಚ್ಚಾಗುತ್ತಿದೆ. ದೇಶದಲ್ಲಿ ಕಳೆದ ವರ್ಷ 106 ಅತ್ಯಾಚಾರ ಪ್ರಕರಣಗಳು ನಡೆದಿದೆ. ಇದರಲ್ಲಿ 0-12 ವರ್ಷದ ಅಪ್ರಾಪ್ತ ಬಾಲಕಿಯರ ಮೇಲೆ ಶೇ.94.60 ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದರು.

ಜಿಐಒ ಮಂಗಳೂರು ಶಾಖೆಯ ಅಧ್ಯಕ್ಷೆ ಶಹನಾಝ್ ಮಾತನಾಡಿ, ದಿಲ್ಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದಂತೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಪರಾಧ ಮುಕ್ತ ಸಮಾಜ ನಿರ್ಮಾಣವಾಗಲು ಸರಕಾರ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಎಸ್‌ಐಒ ಮಂಗಳೂರು ಶಾಖೆಯ ಅಧ್ಯಕ್ಷ ಡಾ.ಮಿಸ್‌ಅಬ್ ಬೆಂಗ್ರೆ, ಎಸ್‌ಐಒ ಮಂಗಳೂರು ಶಾಖೆಯ ಕಾರ್ಯದರ್ಶಿ ಮುಂಝಿರ್ ಅಹ್ಸನ್, ಮುಬೀನ್ ಬೆಂಗ್ರೆ, ಝಮೀರ್ ಪಕ್ಕಲಡ್ಕ, ನಿಝಾಮ್ ಉಳ್ಳಾಲ್, ಜಮಾಅತೆ ಇಸ್ಲಾಮೀ ಹಿಂದ್‌ನ ಮರ್ಯಮ್ ಶಹೀರಾ ಉಪಸ್ಥಿತರಿದ್ದರು.

ಎಸ್‌ಐಒ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News