×
Ad

ಕಾವೇರಿಯಲ್ಲಿ ಗಂಗಾ ನದಿಗಿಂತ 600ಶೇ. ಅಧಿಕ ರಾಸಾಯನಿಕ ವಿಷ!

Update: 2017-12-23 22:51 IST

ಚೆನ್ನೈ,ಡಿ.23: ದೇಶದ ಪ್ರಮುಖ ನದಿಗಳಲ್ಲೊಂದಾಗಿರುವ ಕಾವೇರಿಯಿಂದ ಅತ್ಯಂತ ಕನಿಷ್ಠ ಪ್ರಮಾಣದ ನೀರು ಸಮುದ್ರವನ್ನು ಸೇರುತ್ತದೆಯಾದರೂ, ಈ ನದಿಯು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ವಿಷಗಳನ್ನು ಒಳಗೊಂಡಿದೆ ಎಂದು ಸರಕಾರದ ಆರ್ಥಿಕ ನೆರವಿನ ಅಣ್ಣಾ ವಿಶ್ವವಿದ್ಯಾನಿಲಯದ ಅಧ್ಯಯನವು ಬೆಳಕಿಗೆ ತಂದಿದೆ.

 ಕಾವೇರಿ ನದಿಯಿಂದ ವಾರ್ಷಿಕ ಸುಮಾರು 8.4 ಘನ.ಕಿ.ಮೀ.ಗಳಷ್ಟು ನೀರು ಸಮುದ್ರವನ್ನು ಸೇರುತ್ತದೆ. ನದಿಯ ಪ್ರತಿ ಲೀ.ನೀರು 753 ಮಿ.ಗ್ರಾಂ ಕರಗಿದ ರಾಸಾಯನಿಕ ತ್ಯಾಜ್ಯಗಳನ್ನು ಒಳಗೊಂಡಿದ್ದು, ಗಂಗಾನದಿಗೆ ಹೋಲಿಸಿದರೆ ಇದು ಐದು ಪಟ್ಟಿನಷ್ಟು ಹೆಚ್ಚಿದೆ ಎಂದು ಇತ್ತೀಚಿಗೆ ಬಿಡುಗಡೆಗೊಂಡಿರುವ ಅಧ್ಯಯನದ ಅಂತಿಮ ವರದಿಯು ತಿಳಿಸಿದೆ.

ಕಾವೇರಿಯಲ್ಲಿ ಅಧಿಕ ಪ್ರಮಾಣದಲ್ಲಿರುವ ರಾಸಾಯನಿಕಗಳಿಂದಾಗಿ ಮೇಕೆದಾಟು, ಶ್ರೀರಾಮಸಮುದ್ರಂ, ಕಂಡಿಯೂರು, ಅಪ್ಪಕುಡತನ್, ಪನ್ನವಡಿ ಮತ್ತು ರುದ್ರಪಟ್ಣ ಸೇರಿದಂತೆ ತಮಿಳುನಾಡು ಮತ್ತು ಕರ್ನಾಟಕದ ಹಲವು ಭಾಗಗಳಲ್ಲಿ ಅಂತರ್ಜಲವು ಕಲುಷಿತಗೊಂಡಿದ್ದು, ನೀರಾವರಿಗೆ ಮತ್ತು ಕುಡಿಯಲು ಅನರ್ಹವಾಗಿದೆ. ನದಿಯ ದಾರಿಯುದ್ದಕ್ಕೂ ಇರುವ ಹಲವಾರು ಜವಳಿ, ಡಯಿಂಗ್, ಸಿಮೆಂಟ್ ಮತ್ತು ರಾಸಾಯನಿಕಗಳ ಕೈಗಾರಿಕೆಗಳು ಟನ್‌ಗಟ್ಟಲೆ ಹಾನಿಕಾರಕ ತ್ಯಾಜ್ಯಗಳನ್ನು ಅದರಲ್ಲಿ ಬಿಡುತ್ತಿವೆ.

ಅಧ್ಯಯನಕ್ಕೊಳಪಡಿಸಿದ ಇತರ ನದಿಗಳಿಗೆ ಹೋಲಿಸಿದರೆ ಕಾವೇರಿಯಲ್ಲಿ, ವಿಶೇಷವಾಗಿ ಕೈಗಾರಿಕಾ ಪ್ರದೇಶಗಳು, ತೀರಪ್ರದೇಶಗಳು ಮತ್ತು ಸಂಗಮಸ್ಥಳಗಳ ಸಮೀಪ ಸೋಡಿಯಂ ಮತ್ತು ಕ್ಲೋರೀನ್‌ನಂತಹ ಕಣಗಳು ಹೆಚ್ಚಿವೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಪ್ರೊ.ಎಲ್.ಇಳಂಗೊ ತಿಳಿಸಿದರು.

ಸೋಡಿಯಂ ಹೆಚ್ಚಿನ ಮಟ್ಟದಲ್ಲಿದ್ದರೆ ಅದು ಮಾನವರಲ್ಲಿ ರಕ್ತದೊತ್ತಡಕ್ಕೆ ಕಾರಣ ವಾಗುತ್ತದೆ ಮತ್ತು ಸಂತಾನಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಕನಾಟಕದ ಕೊಡಗು ಜಿಲ್ಲೆಯ ತಲಕಾವೇರಿಯಿಂದ ಬಂಗಾಳ ಉಪಸಾಗರವನ್ನು ಸೇರುವ ತಮಿಳುನಾಡಿನ ಪೂಂಪುಹಾರ್‌ವರೆಗಿನ 800 ಕಿ.ಮೀ.ವರೆಗಿನ ಪಯಣದಲ್ಲಿ ಕೈಗಾರಿಕೆ ಗಳು ಮತ್ತು ಒಳಚರಂಡಿಗಳ ತ್ಯಾಜ್ಯಗಳು, ಕೃಷಿ ಚಟುವಟಿಕೆಗಳ ತ್ಯಾಜ್ಯಗಳು ಕಾವೇರಿ ನದಿಯನ್ನು ಸೇರುತ್ತಿರುವುದು ಸೋಡಿಯಂ ಮಟ್ಟವು ಹೆಚ್ಚಲು ಕಾರಣವಾಗಿದೆ ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News