‘ರಾಜಸ್ಥಾನ ರಂಬಲ್’ನಲ್ಲಿ ವಿಜೇಂದರ್‌ಗೆ ಸತತ 10ನೇ ಜಯ
ಜೈಪುರ, ಡಿ.23: ಘಾನಾದ ‘ಆಫ್ರಿಕನ್ ಚಾಂಪಿಯನ್’ ಎರ್ನೆಸ್ಟ್ ಅಮುಝುರನ್ನು ಹೊಡೆದುರುಳಿಸಿದ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಡಬ್ಲ್ಯೂಬಿಒ ಒರಿಯೆಂಟಲ್ ಹಾಗೂ ಏಷ್ಯನ್ ಪೆಸಿಸಿಕ್ ಸೂಪರ್ ಮಿಡ್ಲ್‌ವೇಟ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.
ಶನಿವಾರ ರಾತ್ರಿ ಇಲ್ಲಿನ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ‘ರಾಜಸ್ಥಾನ ರಂಬಲ್’ ಎಂದು ಕರೆಸಿಕೊಂಡಿರುವ ಬಾಕ್ಸಿಂಗ್ ಕಾದಾಟದಲ್ಲಿ ಎಲ್ಲ 10 ಸುತ್ತುಗಳನ್ನು ಆಡಿದ ವಿಜೇಂದರ್ ಒಮ್ಮತದ ತೀರ್ಪಿನಲ್ಲಿ ಜಯಶಾಲಿಯಾದರು. ಇದೊಂದು ಟೆಕ್ನಿಕಲ್ ನಾಕೌಟ್ ಟೂರ್ನಿಯಲ್ಲದ ಹಿನ್ನೆಲೆಯಲ್ಲಿ ವಿಜೇಂದರ್ ಎಲ್ಲ 10 ಸುತ್ತುಗಳಲ್ಲಿ ಕಾದಾಡಿದರು.
ಈ ಗೆಲುವಿನ ಮೂಲಕ 32ರ ಹರೆಯದ ಹರ್ಯಾಣದ ಬಾಕ್ಸರ್ ವಿಜೇಂದರ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ 10ನೇ ಗೆಲುವು ದಾಖಲಿಸಿದರು. ‘ನಾಕೌಟ್ ಕಿಂಗ್’ ಖ್ಯಾತಿಯನ್ನು ಕಾಯ್ದುಕೊಂಡಿದ್ದಾರೆ. ವಿಜೇಂದರ್ ಪ್ರಸ್ತುತ ಡಬ್ಲುಬಿಒ ರ್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ವಿಜೇಂದರ್ ಆಗಸ್ಟ್‌ನಲ್ಲಿ ಡಬಲ್ ಬೆಲ್ಟ್ ಗೆದ್ದ ನಂತರ ಇದೇ ಮೊದಲ ಬಾರಿ ಸ್ಪರ್ಧಿಸಿದರು.
34ರ ಹರೆಯದ ಘಾನಾದ ಬಾಕ್ಸರ್ 25 ಪಂದ್ಯಗಳಲ್ಲಿ 23 ಪಂದ್ಯ ಗೆದ್ದಿದ್ದು, ಇದರಲ್ಲಿ 21 ನಾಕೌಟ್ ಕೂಡ ಸೇರಿದೆ.