×
Ad

ಭಾಂಬ್ರಿ, ರಾಮ್‌ಕುಮಾರ್‌ಗೆ ವೈಲ್ಡ್ ಕಾರ್ಡ್

Update: 2017-12-23 23:51 IST

ಪುಣೆ, ಡಿ.23: ಭಾರತದ ಮೂವರು ಟೆನಿಸ್ ಆಟಗಾರರಾದ ಯೂಕಿ ಭಾಂಬ್ರಿ, ರಾಮ್‌ಕುಮಾರ್ ರಾಮನಾಥನ್ ಹಾಗೂ ಅರ್ಜುನ್ ಕಧೆ ಟಾಟಾ ಓಪನ್ ಎಟಿಪಿ 250 ವರ್ಲ್ಡ್ ಟೂರ್ ಟೂರ್ನಿಯಲ್ಲಿ ನೇರ ಪ್ರವೇಶ ಪಡೆದಿದ್ದಾರೆ. ಮಹಲುಂಗೆ ಬಾಲೆವಾಡಿ ಸ್ಟೇಡಿಯಂನಲ್ಲಿ ಡಿ.30,31 ರಂದು ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಆರಂಭವಾಗಲಿರುವ ಟೂರ್ನಿಯು 2018ರ ಜ.6ರ ತನಕ ನಡೆಯಲಿದೆ. ಮೊದಲ ಆವೃತ್ತಿಯ ಟಾಟಾ ಓಪನ್ ಮಹಾರಾಷ್ಟ್ರ ಟೂರ್ನಿಗೆ ಶನಿವಾರ ಆಯೋಜಕರು ವೈರ್ಲ್ಡ್‌ಕಾರ್ಡ್ ಪ್ರವೇಶ ಪಡೆದವರ ಪಟ್ಟಿ ಪ್ರಕಟಿಸಿದ್ದಾರೆ.

1996ರಲ್ಲಿ ಆರಂಭವಾಗಿರುವ ಈ ಟೂರ್ನಮೆಂಟ್ ಕಳೆದ 21 ವರ್ಷಗಳಿಂದ ಚೆನ್ನೈನಲ್ಲಿ ಚೆನ್ನೈ ಓಪನ್ ಟೂರ್ನಿ ಎನ್ನುವ ಹೆಸರಲ್ಲಿ ನಡೆಯುತ್ತಿತ್ತು. ಈ ವರ್ಷ ಟೂರ್ನಿಯು ಪುಣೆಗೆ ಸ್ಥಳಾಂತರವಾಗಿದ್ದು ಟಾಟಾ ಓಪನ್ ಹೆಸರಿನಲ್ಲಿ ನಡೆಯಲಿದೆ.ಟೂರ್ನಿಯಲ್ಲಿ ವಿಶ್ವದ ನಂ.6ನೇ ರ್ಯಾಂಕಿನ ಆಟಗಾರ ಮರಿನ್ ಸಿಲಿಕ್, ಯುಎಸ್ ಓಪನ್ ಫೈನಲಿಸ್ಟ್ ಕೇವಿನ್ ಆ್ಯಂಡರ್ಸನ್ ಹಾಗೂ ಕ್ರೊಯೇಷಿಯದ ಇವೊ ಕಾರ್ಲೊವಿಕ್ ಸಹಿತ ಹಲವು ಪ್ರಮುಖ ಆಟಗಾರರು ಭಾಗವಹಿಸುತ್ತಿದ್ದಾರೆ.

ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಭಾಂಬ್ರಿ ಟೂರ್ನಿಯಲ್ಲಿ ಭಾರತದ ನಾಯಕತ್ವವಹಿಸಲಿದ್ದಾರೆ. 25ರ ಹರೆಯದ ಭಾಂಬ್ರಿ ಒಂದು ವರ್ಷದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ನವೆಂಬರ್‌ನಲ್ಲಿ ಕೆಪಿಐಟಿ-ಎಂಎಸ್‌ಎಲ್‌ಟಿಎ ಚಾಲೆಂಜರ್ ಟೂರ್ನಿಯಲ್ಲಿ ರಾಮನಾಥನ್‌ರನ್ನು ಸೋಲಿಸಿದ್ದ ಭಾಂಬ್ರಿ ಪ್ರಶಸ್ತಿ ಜಯಿಸಿದ್ದರು.

ವಾಶಿಂಗ್ಟನ್‌ನಲ್ಲಿ ನಡೆದ ಸಿಟಿ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದ ಭಾಂಬ್ರಿ ದ.ಆಫ್ರಿಕದ ಕೇವಿನ್ ಆ್ಯಂಡರ್ಸನ್ ವಿರುದ್ಧ 3 ಸೆಟ್‌ಗಳ ಅಂತರದಿಂದ ಸೋತಿದ್ದರು.

 ಭಾರತೀಯ ಎಟಿಪಿ ಟೂರ್ನಿಯಲ್ಲಿ ಭಾಂಬ್ರಿ ಆರನೇ ಬಾರಿ ಪ್ರಧಾನ ಸುತ್ತಿನಲ್ಲಿ ಸ್ಪರ್ಧಿಸುತ್ತಿದ್ದಾರೆ. 2014ರಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ಭಾಂಬ್ರಿ ಅವರು ವಾಸೆಕ್ ಪೊಪಿಸಿಲ್ ವಿರುದ್ಧ್ದ ಸೋತಿದ್ದರು.

 ‘‘ಈ ವರ್ಷ 20ಕ್ಕೂ ಅಧಿಕ ಟೂರ್ನಮೆಂಟ್‌ಗಳನ್ನು ಆಡಿದ್ದೇನೆ. ಕಳೆದ ಬಾರಿ ಪುಣೆಯಲ್ಲಿ ಟೂರ್ನಿಯನ್ನು ಗೆದ್ದುಕೊಂಡಿದ್ದೆ. ಈ ಟೂರ್ನಿಯನ್ನು ಎದುರು ನೋಡುತ್ತಿರುವೆ’’ ಎಂದು ಭಾಂಬ್ರಿ ಹೇಳಿದ್ದಾರೆ.ಐಟಿಎಫ್ ಫ್ಯೂಚರ್ಸ್ ಇವೆಂಟ್‌ನಲ್ಲಿ ಮೂರು ಪ್ರಶಸ್ತಿಗಳನ್ನು ಜಯಿಸಿರುವ ರಾಮನಾಥನ್(142ನೇ ರ್ಯಾಂಕ್)ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ.

23ರ ಹರೆಯದ ಚೆನ್ನೈ ಆಟಗಾರ ರಾಮನಾಥನ್ ಐದನೇ ಬಾರಿ ಪ್ರಧಾನ ಸುತ್ತಿನಲ್ಲಿ ಆಡುತ್ತಿದ್ದಾರೆ. 2016ರಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವುದು ರಾಮನಾಥನ್ ಸಾಧನೆಯಾಗಿದೆ. ಮೊದಲ ಬಾರಿ ಫ್ಯೂಚರ್ಸ್ ಇವೆಂಟ್‌ನ್ನು ಜಯಿಸಿರುವ ಅರ್ಜುನ್ ಕಧೆ ಮಹಾರಾಷ್ಟ್ರ ಓಪನ್‌ನ ಪ್ರಧಾನ ಸುತ್ತಿಗೆ ವೈರ್ಲ್ಡ್‌ಕಾರ್ಡ್ ಪಡೆದಿದ್ದಾರೆ. 2012ರಲ್ಲಿ ತನ್ನ 18ರ ಹರೆಯದಲ್ಲಿ ಚೆನ್ನೈ ಓಪನ್‌ನ ಅರ್ಹತಾ ಸುತ್ತಿನಲ್ಲಿ ಆಡಿದ್ದ ಅರ್ಜುನ್ ಕೆನ್ನಿ ಡಿ ಸ್ಚೆಪ್ಪೆರ್ ವಿರುದ್ಧ್ದ ಸೋತಿದ್ದರು.ಮೊದಲ ಆವೃತ್ತಿಯ ಟಾಟಾ ಓಪನ್ ಟೂರ್ನಿಯಲ್ಲಿ ಟೆನಿಸ್ ಅಭಿಮಾನಿಗಳನ್ನು ಸ್ಟೇಡಿಯಂನತ್ತ ಆಕರ್ಷಿಸಲು ಟಿಕೆಟ್ ದರವನ್ನು 150 ರೂ.ನಿಂದ 500 ರೂ. ತನಕ ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News