ಐಪಿಎಲ್‌ನಲ್ಲಿ ಭಾಗವಹಿಸಲು ಸ್ಟೋಕ್ಸ್ ಗೆ ಇಸಿಬಿ ಅವಕಾಶ

Update: 2017-12-24 18:25 GMT

ಲಂಡನ್, ಡಿ.24: ಈ ವರ್ಷದ ಸೆಪ್ಟಂಬರ್‌ನಲ್ಲಿ ಬ್ರಿಸ್ಟೊಲ್‌ನ ಪಬ್‌ವೊಂದರ ಹೊರಗೆ ಕುಡಿದ ಅಮಲಿನಲ್ಲಿ ಹೊಡೆದಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಈಗ ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆ್ಯಶಸ್ ಸರಣಿಗೆ ಆಯ್ಕೆಯಾಗಿರಲಿಲ್ಲ. ಸ್ಟೋಕ್ಸ್ ಮುಂದಿನ ವರ್ಷ ನಡೆಯಲಿರುವ ಐಪಿಎಲ್‌ನಲ್ಲಿ ಆಡುವ ಕುರಿತು ಅನುಮಾನವಿತ್ತು.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್ ಹ್ಯಾರಿಸನ್,‘‘ಐಪಿಎಲ್‌ನಲ್ಲಿ ಸ್ಟೋಕ್ಸ್ ಮತ್ತೊಮ್ಮೆ ಆಡುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ನ್ಯೂಝಿಲೆಂಡ್‌ನಲ್ಲಿ ದೇಶೀಯ ಕ್ರಿಕೆಟ್ ಆಡಲು ಸ್ಟೋಕ್ಸ್ ಎನ್‌ಒಸಿ ಕೇಳಿದ್ದರು. ನಾವು ಸಂತೋಷದಿಂದ ನೀಡಿದ್ದೇವೆ. ಐಪಿಎಲ್‌ನಲ್ಲಿ ಭಾಗವಹಿಸಬೇಕೋ, ಬೇಡವೋ ಎಂದು ನಿರ್ಧರಿಸುವುದು ಸ್ಟೋಕ್ಸ್‌ಗೆ ಬಿಟ್ಟ ವಿಚಾರ. ಅವರು ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕೆಂದು ನಾವು ಹೇಳುವುದಿಲ್ಲ. ಅವರಿಗೆ ನ್ಯೂಝಿಲೆಂಡ್‌ಗೆ ತೆರಳಲು ಅವಕಾಶ ನೀಡಲಾಗಿದೆ. ಹಾಗಾಗಿ ವಿಶ್ವದ ಇತರ ಭಾಗಗಳಲ್ಲಿ ಆಡಲು ಅನುಮತಿ ಸಿಗಲಿದೆ’’ ಎಂದರು.

ಸ್ಟೋಕ್ಸ್ 2017ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಪುಣೆ ರೈಸಿಂಗ್ ಜೈಂಟ್ ತಂಡಕ್ಕೆ 14.5 ಕೋ.ರೂ.ಗೆ ಹರಾಜಾಗುವ ಮೂಲಕ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್ ಸ್ಟೋಕ್ಸ್ 12 ಪಂದ್ಯಗಳಲ್ಲಿ 316 ರನ್ ಹಾಗೂ 12 ವಿಕೆಟ್‌ಗಳನ್ನು ಕಬಳಿಸಿ ಪುಣೆ ತಂಡ ಫೈನಲ್‌ಗೆ ತಲುಪಲು ಪ್ರಮುಖ ಪಾತ್ರವಹಿಸಿದ್ದರು. ಈ ಸಾಹಸಕ್ಕೆ ವರ್ಷದ ಅತ್ಯಂತ ವೌಲ್ಯಯುತ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News