ಯುದ್ಧದ ಸುಳಿಗಾಳಿಯಿಂದ ವಿಶ್ವಶಾಂತಿಗೆ ಧಕ್ಕೆ: ಪೋಪ್ ಕ್ರಿಸ್‌ಮಸ್ ಸಂದೇಶ

Update: 2017-12-25 13:53 GMT

ವ್ಯಾಟಿಕನ್ ಸಿಟಿ, ಡಿ.25: ವಿಶ್ವದಲ್ಲಿ ಯುದ್ಧದ ಸುಳಿಗಾಳಿ ಬೀಸುತ್ತಿದ್ದು , ಗತಕಾಲದ ಅಭಿವೃದ್ಧಿ ಮಾದರಿಯು ಮಾನವತೆ, ಸಮಾಜ ಹಾಗೂ ಪರಿಸರದ ಅವನತಿಗೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಪೋಪ್ ಫ್ರಾನ್ಸಿಸ್, ಪರಸ್ಪರರಲ್ಲಿ ನಂಬಿಕೆಯ ಭಾವ ವೃದ್ಧಿಸಲಿ ಎಂದು ಕರೆ ನೀಡಿದ್ದಾರೆ.

ಸೈಂಟ್ ಪೀಟರ್ಸ್ ಚೌಕದ ಎದುರಿಗಿರುವ ಬಾಲ್ಕನಿಯಿಂದ ಸಾಂಪ್ರದಾಯಿಕ ಕ್ರಿಸ್‌ಮಸ್ ಸಂದೇಶ ನೀಡಿದ ಪೋಪ್, ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ‘ಎರಡು - ದೇಶ ಪರಿಹಾರ’ ಸೂಕ್ತ ಎಂದರು ಹಾಗೂ ಕೊರಿಯ ದ್ವೀಪಸಮೂಹದಲ್ಲಿ ತಲೆದೋರಿರುವ ಸಂಘರ್ಷಮಯ ಪರಿಸ್ಥಿತಿ ದೂರವಾಗಲಿ ಎಂದು ಪ್ರಾರ್ಥಿಸಿದರು. ಕ್ರಿಸ್‌ಮಸ್ ಹಬ್ಬ ಜೀಸಸ್ ಜನನದ ಸಂಭ್ರಮಾಚರಣೆಯಾಗಿದೆ ಎಂದವರು ತಮ್ಮ ಸಾಂಪ್ರದಾಯಿಕ ‘ನಗರಕ್ಕೆ ಮತ್ತು ಜಗತ್ತಿಗೆ’ ನೀಡಿದ ಕ್ರಿಸ್‌ಮಸ್ ಸಂದೇಶದಲ್ಲಿ ನುಡಿದರು.

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಸಾವುನೋವಿನ ಘಟನೆಗಳಿಗೆ ವಿಷಾದ ಸೂಚಿಸಿದ ಪೋಪ್, ಇವಕ್ಕೆ ಶಾಶ್ವತ ಪರಿಹಾರ ಹುಡುಕುವ ಅಗತ್ಯವಿದೆ ಎಂದರು. ಸಿರಿಯವು ಯುದ್ದದಿಂದ ನಲುಗಿದ್ದರೆ, ಇರಾಕ್ ಕಳೆದ 15 ವರ್ಷಗಳಿಂದ ನಿರಂತರ ನಡೆಯುತ್ತಿರುವ ಘರ್ಷಣೆಯಿಂದ ಹರಿದುಹಂಚಾಗಿ ಹೋಗಿದೆ. ಯೆಮನ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಮರೆಯಲು ಕಷ್ಟಸಾಧ್ಯ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ತಮ್ಮ ಇತ್ತೀಚಿನ ಬಾಂಗ್ಲಾ ಮತ್ತು ಮ್ಯಾನ್ಮಾರ್ ಪ್ರವಾಸವನ್ನು ಉಲ್ಲೇಖಿಸಿದ ಅವರು, ಈ ಪ್ರದೇಶದಲ್ಲಿರುವ ಅಲ್ಪಸಂಖ್ಯಾತ ಜನರ ಘನತೆಯನ್ನು ಸೂಕ್ತವಾಗಿ ರಕ್ಷಿಸುವ ಕಾರ್ಯ ಆಗಬೇಕಿದೆ ಎಂದರು. ಮಾನವ ಕಳ್ಳಸಾಗಣೆದಾರರ ಕೈಗೆ ಸಿಕ್ಕಿಬಿದ್ದು ನರಳುವ ಮತ್ತು ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿಕೊಳ್ಳುವ ಮಕ್ಕಳ ಹಾಗೂ ಬಾಲಕಾರ್ಮಿಕರ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಪೋಪ್ ಕರೆ ನೀಡಿದರು.

ಪೋಪ್ ಪ್ರಸ್ತಾವಿಸಿದ ಜಾಗತಿಕ ಬಿಕ್ಕಟ್ಟಿನ ಎರಡೂ ಘಟನೆಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನ ಪಾತ್ರ ವಹಿಸಿರುವುದು ಇಲ್ಲಿ ಗಮನಾರ್ಹವಾಗಿದೆ. ಜೆರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿ ಎಂದು ಘೋಷಿಸಿರುವುದು ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಿದ್ದರೆ, ಉತ್ತರಕೊರಿಯದ ಪರಮಾಣು ಪರೀಕ್ಷೆ ವಿಷಯದಲ್ಲಿ ಅಮೆರಿಕ ಮತ್ತು ಉತ್ತರಕೊರಿಯ ಮಧ್ಯೆ ಮನಸ್ತಾಪ ಬೆಳೆದಿರುವುದು ಕೊರಿಯಾ ದ್ವೀಪ ಸಮೂಹದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News