ಹಸಿವಿನಿಂದ ಗೋಶಾಲೆಯಲ್ಲಿದ್ದ 50 ಗೋವುಗಳ ಸಾವು
ರಾಯಪುರ, ಡಿ. 25: ಛತ್ತೀಸ್‌ಗಢದ ಸರಕಾರಕ್ಕೆ ಸೇರಿದ ಮೂರು ಗೋಶಾಲೆಗಳಲ್ಲಿ 200 ಗೋವುಗಳು ಮೃತಪಟ್ಟ ನಾಲ್ಕು ತಿಂಗಳ ಬಳಿಕ, ಇಲ್ಲಿಂದ ದಕ್ಷಿಣಕ್ಕೆ 100 ಕಿ. ಮೀ. ದೂರದಲ್ಲಿರುವ ಧಾಮ್‌ತಾರಿ ಜಿಲ್ಲೆಯ ಮಗರ್ಲೋಡ್‌ನಲ್ಲಿ ಹಸಿವು ಹಾಗೂ ನಿರ್ಲಕ್ಷದಿಂದ 50ಕ್ಕೂ ಅಧಿಕ ಗೋವುಗಳು ಮೃತಪಟ್ಟಿವೆ. ಪೊಲೀಸ್ ದೂರು ನೀಡಿರುವ ಗ್ರಾಮಸ್ಥರು, ಮೂರು ತಿಂಗಳ ಹಿಂದೆ ಆರಂಭಿಸಲಾದ ಈ ಗೋಶಾಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ಹಸಿವು ಹಾಗೂ ಸೂಕ್ತ ಆರೈಕೆ ಕೊರತೆಯಿಂದ ಒಟ್ಟು 100 ಹಸುಗಳು ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.
ಮಾನ್‌ಹರನ್ ಲಾಲ್ ಸಾಹು ಮಾಲಕತ್ವದ ವೇದಮಠ ಗೋಶಾಲೆಯಲ್ಲಿ ಹಸುಗಳ ಸಾವು ಸಂಭವಿಸಿದೆ. ಧಾಮ್‌ತಾರಿ ಜಿಲ್ಲಾಧಿಕಾರಿ ಸಿ.ಆರ್ ಪ್ರಸನ್ನ ರವಿವಾರ ಗೋಶಾಲೆಗೆ ಭೇಟಿ ನೀಡಿದ್ದಾರೆ ಹಾಗೂ ತನಿಖೆಗೆ ಆದೇಶಿಸಿದ್ದಾರೆ. ಗೋಶಾಲೆಯ ಸುತ್ತಮತ್ತ 37 ಹಸುಗಳ ಅಸ್ತಿಪಂಜರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಹಿಂದಿನ ಎರಡು ದಿನಗಳಲ್ಲೇ ಆರೇಳು ಗೋವುಗಳು ಸಾವನ್ನಪ್ಪಿವೆ. ಸಾಹು ಅವರನ್ನು ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಛತ್ತೀಸ್‌ಗಢ ಕೃಷಿ ಜಾನುವಾರು ಹಿಂಸೆ ತಡೆ ಕಾಯ್ದೆ -2004ರ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಧಾಮ್‌ತಾರಿಯ ಪೊಲೀಸ್ ಅಧೀಕ್ಷಕ ರಜನೀಶ್ ಸಿಂಗ್ ತಿಳಿಸಿದ್ದಾರೆ.
ಗೋಶಾಲೆ ನಡೆಸಲು ಸಾಹು ಅವರಲ್ಲಿ ಸಮರ್ಪಕ ದಾಖಲೆಗಳಲ್ಲಿ ಎಂದು ಹೇಳಲಾಗಿದೆ. ಆಗಸ್ಟ್‌ನಲ್ಲಿ ಮೂರು ಗೋಶಾಲೆಗಳಲ್ಲಿ 200 ಹಸುಗಳು ಸಾವನ್ನಪ್ಪಿದ ಬಳಿಕ ಮುಖ್ಯಮಂತ್ರಿ ರಮಣ್ ಸಿಂಗ್, ರಾಜ್ಯಾದ್ಯಂತ ಇರುವ ಗೋಶಾಲೆಗಳನ್ನು ಪರಿಶೀಲಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.