ರಾಹುಲ್ ಗಾಂಧಿಯನ್ನು ಪ್ರಶಂಸಿಸಿದ ಶಿವಸೇನೆ
ಪುಣೆ, ಡಿ. 25: ಗುಜರಾತ್ ವಿಧಾನ ಸಭೆಯ ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗೆಲುವು ಪಡೆದುಕೊಳ್ಳಲು ವಿಫಲವಾಗಿರಬಹುದು. ಆದರೆ, 2019ರಲ್ಲಿ ತನ್ನ ಪಕ್ಷ ಜಯಶಾಲಿಯಾಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಶಿವಸೇನೆ ರವಿವಾರ ಹೇಳಿದೆ.
ರಾಹುಲ್ ಗಾಂಧಿ ಅವರ ಸಕಾರಾತ್ಮಕ ನಾಯಕತ್ವದ ಬಗ್ಗೆ ಜನರು, ಪಕ್ಷಗಳು ಹಾಗೂ ವಿಪಕ್ಷದವರಿಗೆ ಅರಿವಾಗಿದೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್ ಸೇನೆಯ ಬದಲಾದ ನಿಲುವನ್ನು ಸ್ವಾಗತಿಸಿದೆ.
ಬಿಜೆಪಿ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಲೇವಡಿ ಮಾಡುತ್ತಿತ್ತು. ಆದರೆ, ರಾಹುಲ್ ಗಾಂಧಿ ಅಧಿಕಾರದಿಂದಲೇ ಜಯ ಹಾಗೂ ಅಧಿಕಾರವನ್ನು ಖರೀದಿಸಬಹುದು ಎಂಬುದನ್ನು ಸುಳ್ಳು ಮಾಡಿದರು ಎಂದು ಸೇನೆಯ ಮುಖವಾಣಿ ಸಾಮ್ನಾದ ಕಾರ್ಯಕಾರಿ ಸಂಪಾದಕ ಸಂಜಯ್ ರಾವತ್ ಹೇಳಿದ್ದಾರೆ. ಗುಜರಾತ್ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರ ನಡುವೆ ನಡೆಯಿತು. ರಾಹುಲ್ ಗಾಂಧಿ ಬಿಜೆಪಿ ಹಾಗೂ ಪ್ರಧಾನಿ ಅವರಿಗೆ ಈ ಚುನಾವಣೆ ಸಿಹಿಯಾಗುವುದನ್ನು ತಪ್ಪಿಸಿದರು ಎಂದು ಅವರು ಹೇಳಿದ್ದಾರೆ.
ಬಿಜೆಪಿ ಅಭಿಯಾನದಲ್ಲಿ ರಾಹುಲ್ ಗಾಂಧಿ ಅವರನ್ನು ಗುರಿಯಾಗಿರಿಸಿತ್ತು. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯ ‘ಕಾಂಗ್ರೆಸ್ ಮುಕ್ತ ಭಾರತ’ಕ್ಕೆ ಸಮರ್ಪಕ ಪ್ರತ್ಯುತ್ತರ ನೀಡಿದರು ಎಂದರು.
ರಾಹುಲ್ ಗಾಂಧಿ ಕಾಂಗ್ರೆಸ್ ಅನ್ನು ಬೂದಿಯಿಂದ ಮೇಲೆತ್ತಿದರು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತು. ಆದರೆ, ಯಶಸ್ವಿಯಾಗಲಿಲ್ಲ. ಇದುವರೆಗೆ ಅದು ಯಶಸ್ವಿಯಾಗದೇ ಉಳಿಯಿತು. ‘ತನ್ನನ್ನು ವಿಫಲ ಹಾಗೂ ಮೂರ್ಖ’ ಎಂದು ಲೇವಡಿ ಮಾಡುತ್ತಿರುವುದರಿಂದ ರಾಹುಲ್ ಗಾಂಧಿ ಶ್ರಮವಹಿಸಿ ಚುನಾವಣಾ ಪ್ರಚಾರ ನಡೆಸಿದರು. ಗುಜರಾತ್ ವಿಧಾನ ಸಭೆಯ ಫಲಿತಾಂಶದಲ್ಲಿ ಸಂಭವಿಸಿದ ಮಹತ್ತರ ಬದಲಾವಣೆ ಕಾಂಗ್ರೆಸ್‌ನ ವಿಫಲತೆಯ ಸರಣಿಯನ್ನು ದೂರಮಾಡಿತು ಎಂದು ರಾವತ್ ಹೇಳಿದ್ದಾರೆ.