×
Ad

ಟಿಟಿವಿ ದಿನಕರನ್‌ರ ಆರು ಬೆಂಬಲಿಗರ ಉಚ್ಛಾಟನೆ

Update: 2017-12-25 21:15 IST

ಚೆನ್ನೈ, ಡಿ. 25: ಮೂಲೆಗುಂಪು ಮಾಡಲಾದ ಪಕ್ಷದ ನಾಯಕ ಟಿಟಿವಿ ದಿನಕರನ್ ಅವರಿಗೆ ಬೆಂಬಲ ನೀಡಿದ ಪಕ್ಷದ ಆರು ಮಂದಿ ಪದಾಧಿಕಾರಿಗಳನ್ನು ಎಐಎಡಿಎಂಕೆ ಸೋಮವಾರ ಉಚ್ಛಾಟಿಸಿದೆ.

ಎಐಎಡಿಎಂಕೆ ಆರ್.ಕೆ. ನಗರ ಉಪಚುನಾವಣೆಯಲ್ಲಿ ಸೋತು ಅವಮಾನ ಎದುರಿಸಿದ ಒಂದು ದಿನದ ಬಳಿಕ ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಆಯೋಜಿಸಿದ ಪಕ್ಷದ ನಿರ್ಣಾಯಕ ಸಭೆಯಲ್ಲಿ ಈ ನಿರ್ದಾರ ತೆಗೆದುಕೊಳ್ಳಲಾಗಿದೆ.

  ಟಿಟಿವಿ ದಿನಕರನ್ ಅವರನ್ನು ಬೆಂಬಲಿಸಿದ ಪಕ್ಷದ ಆರು ಜಿಲ್ಲೆಗಳ ಕಾರ್ಯದರ್ಶಿಗಳನ್ನು ಎಐಎಡಿಎಂಕೆ ಉಚ್ಛಾಟಿಸಿದೆ ಹಾಗೂ ಇವರನ್ನು ‘ವಂಚಕರು’ ಎಂದು ಬಣ್ಣಿಸಿದೆ. ಎಐಎಡಿಎಂಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾಗಿದ್ದ ಎಸ್. ವೆಟ್ರಿವೇಲು, ತಂಗ ತಮಿಳ್ ಸೆಲ್ವನ್, ರಂಗಸ್ವಾಮಿ, ಮುತ್ತಯ್ಯ, ವಿ.ವಿ. ಕಲೈರಾಜನ್ ಹಾಗೂ ಶೋಲಿಂಘುರ್ ಪಾರ್ಥಿಬನ್ ಅವರನ್ನು ಉಚ್ಛಾಟಿಸಲಾಗಿದೆ. ತಮಿಳುನಾಡು ವಿಧಾನ ಸಭೆ ಸ್ಪೀಕರ್‌ರಿಂದ ಈ ಹಿಂದೆ ಅನರ್ಹಗೊಂಡ 18 ಎಐಎಡಿಎಂಕೆ ಶಾಸಕರಲ್ಲಿ ಕೆಲವರು ಇದರಲ್ಲಿ ಸೇರಿದ್ದಾರೆ.

ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿಧಾನ ಸಭಾ ಸ್ಥಾನವಾದ ಆರ್.ಕೆ. ನಗರದಲ್ಲಿ ದಿನಕರನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ತನ್ನ ಪ್ರತಿಸ್ಪರ್ಧಿ ಹಾಗೂ ಎಐಎಡಿಎಂಕೆಯ ಹಿರಿಯ ನಾಯಕ ಇ. ಮಧುಸೂದನ್ ಅವರನ್ನು 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಹಲವು ಪ್ರಕರಣಗಳು ತಿರುಗುಬಾಣವಾಗಿರುವುದು, ಎರಡೆಲೆ ಚಿಹ್ನೆಯನ್ನು ಕಳೆದುಕೊಂಡಿರುವುದು ಸೇರಿದಂತೆ ಅನೇಕ ಅಡ್ಡಿ ಆತಂಕಗಳ ನಡುವೆಯೂ ಆರ್.ಕೆ. ನಗರ ಉಪಚುನಾವಣೆಯಲ್ಲಿ ದಿನಕರನ್ ಜಯ ಗಳಿಸಿದ್ದರು. ಇದರಿಂದ ಎಐಎಡಿಎಂಕೆ ಹಾಗೂ ಡಿಎಂಕೆ ತೀವ್ರ ಮುಖಭಂಗ ಎದುರಿಸುವಂತಾಗಿದೆ.

  ಇಂದು ನಡೆದ ಸಭೆಯ ಬಳಿಕ ಆರ್.ಕೆ. ನಗರ ಫಲಿತಾಂಶ ಪಕ್ಷದ ಸೋಲಲ್ಲ ಎಂದು ಇ. ಪಳನಿಸ್ವಾಮಿ ಹಾಗೂ ಒ. ಪನ್ನೀರ್‌ಸೆಲ್ವಂ ವ್ಯಾಖ್ಯಾನಿಸಿದ್ದಾರೆ ಹಾಗೂ ದಿನಕರನ್ ಅವರು ಹಣದ ಮೂಲಕ ಜಯವನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News