ಭಾರತದ ವಿಮಾನ ಯಾನ ಸಂಸ್ಥೆಗಳಿಂದ 900 ವಿಮಾನ ಖರೀದಿ
ಹೊಸದಿಲ್ಲಿ, ಡಿ. 25: ಭಾರತದ ವಿಮಾನ ಯಾನ ಸಂಸ್ಥೆಗಳು ಮುಂಬರುವ ವರ್ಷಗಳಲ್ಲಿ 900 ವಿಮಾನಗಳನ್ನು ನಿಯೋಜಿಸುವ ಸಾಧ್ಯತೆ ಇದೆ. ಇದರಲ್ಲಿ 448 ವಿಮಾನಗಳನ್ನು ಇಂಡಿಗೊ ವಿಮಾನ ಯಾನ ಸಂಸ್ಥೆಯೊಂದೇ ನಿಯೋಜಿಸಲಿದೆ ಎಂದು ಅಧೀಕೃತ ದತ್ತಾಂಶಗಳು ತಿಳಿಸಿವೆ.
ವೈಮಾನಿಕ ಮಾರುಕಟ್ಟೆ ತ್ವರಿತವಾಗಿ ಬೆಳೆಯುತ್ತಿರುವ ಜಗತ್ತಿನ ದೇಶಗಳಲ್ಲಿ ಭಾರತ ಕೂಡ ಒಂದು. ಹೆಚ್ಚಿನ ವಿಮಾನ ಯಾನ ಸಂಸ್ಥೆಗಳು ಭಾರತದಲ್ಲಿ ತನ್ನ ವಿಮಾನಗಳ ನಿಯೋಜನೆ ವಿಸ್ತರಿಸುವ ಮಹತ್ವಾಕಾಂಕ್ಷೆ ಹೊಂದಿವೆ.
ನಾಗರಿಕ ವಾಯು ಯಾನ ಸಚಿವಾಲಯದಿಂದ ಲಭ್ಯವಿರುವ ದತ್ತಾಂಶದಂತೆ, ಬಜೆಟ್ ಏರ್‌ಲೈನ್‌ಗಳಾದ ಇಂಡಿಗೊ, ಸ್ಪೈಸ್ ಜೆಟ್, ಗೋಎಯರ್, ಏಯರ್ ಏಶ್ಯಾ ಭಾರತದಲ್ಲಿ ತಮ್ಮ ವಿಮಾನಗಳ ಸಂಖ್ಯೆ ಹೆಚ್ಚಿಸಲು ಭರದ ಸಿದ್ಧತೆ ನಡೆಸುತ್ತಿವೆ.
ಇತರ ವಿಮಾನ ಯಾನ ಸಂಸ್ಥೆಗಳ ಜೊತೆಗೆ ದೇಶಿ ವಿಮಾನ ಸಂಸ್ಥೆಗಳು ಸುಮಾರು 900ಕ್ಕೂ ಅಧಿಕ ವಿಮಾನಗಳು ಸೇವೆಗೆ ನಿಯೋಜಿಸಲಿವೆ. ಈಗಿರುವ 150 ವಿಮಾನಗಳ ಜೊತೆಗೆ ಏಳೆಂಟು ವರ್ಷಗಳಲ್ಲಿ ಇನ್ನೂ 448 ವಿಮಾನಗಳನ್ನು ನಿಯೋಜಿಸಲು ಇಂಡಿಗೋ ಸಿದ್ಧವಾಗಿದೆ. ಸ್ಪೈಸ್ ಜೆಟ್ 57 ವಿಮಾನಗಳನ್ನು ಹೊಂದಿದ್ದು, ಅದು ಕೂಡ ತನ್ನ ವಿಮಾನದ ಸಂಖ್ಯೆ ಹೆಚ್ಚಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಗೋಎಯರ್ 2018-2022ರ ಅವಧಿಯಲ್ಲಿ 119 ವಿಮಾನಗಳನ್ನು ನಿಯೋಜಿಸಲಿದೆ. ಈಗ ಅದರಲ್ಲಿರುವ ವಿಮಾನಗಳ ಸಂಖ್ಯೆ 34. ಏರ್ ಏಶ್ಯಾ ಮುಂದಿನ 5 ವರ್ಷಗಳಲ್ಲಿ 60 ವಿಮಾನಗಳನ್ನು ಸೇವೆಗೆ ನಿಯೋಜಿಸಲಿದೆ. ಈಗ ಅದು 14 ವಿಮಾನಗಳನ್ನು ಮಾತ್ರ ಹೊಂದಿದೆ. ಜೆಟ್ ಏರ್‌ವೇಸ್ 107 ವಿಮಾನಗಳನ್ನು ಹೊಂದಿದೆ. 2018-2024ರಲ್ಲಿ ಅದು 81 ವಿಮಾನಗಳನ್ನು ಹೊಂದಲಿದೆ.