×
Ad

ನಾಲ್ಕನೇ ಆ್ಯಶಸ್ ಟೆಸ್ಟ್: ಸ್ಮಿತ್ ಲಭ್ಯ, ಸ್ಟಾರ್ಕ್ ಬದಲಿಗೆ ಬರ್ಡ್

Update: 2017-12-25 23:51 IST

ಮೆಲ್ಬೋರ್ನ್, ಡಿ.25: ಆತಿಥೇಯ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ನಡುವೆ ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯ ಮಂಗಳವಾರ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ(ಎಂಸಿಜಿ) ಆರಂಭವಾಗಲಿದೆ.

ಗಾಯಗೊಂಡಿರುವ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬದಲಿಗೆ ಜಾಕ್ಸನ್ ಬರ್ಡ್‌ರನ್ನು ಆಯ್ಕೆ ಮಾಡಲಾಗಿದೆ. ನೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದ ನಾಯಕ ಸ್ಟೀವ್ ಸ್ಮಿತ್ ನಾಲ್ಕನೇ ಟೆಸ್ಟ್‌ನಲ್ಲಿ ಆಡಲಿದ್ದಾರೆ.

ಸ್ಟಾರ್ಕ್‌ಗೆ ಪರ್ತ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಕಾಲಿಗೆ ಗಾಯವಾಗಿತ್ತು. ಗಾಯ ಗಂಭೀರವಾಗಿರದಿದ್ದರೂ 2018ರಲ್ಲಿ ನಡೆಯುವ ಪ್ರಮುಖ ಟೆಸ್ಟ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಲಾಗಿದೆ. 2012ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ ಬರ್ಡ್ ಇದೀಗ 9ನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದ್ದಾರೆ. ಸುಮಾರು ಒಂದು ವರ್ಷದ ಬಳಿಕ ಆಸ್ಟ್ರೇಲಿಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಪಾಕ್ ವಿರುದ್ಧ ಆಡಿದ್ದರು. ಬರ್ಡ್ ಶೀಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ತಾಸ್ಮಾನಿಯ ತಂಡದ ಪರ ಆಡಿರುವ 4 ಪಂದ್ಯಗಳಲ್ಲಿ ಒಟ್ಟು 25 ವಿಕೆಟ್‌ಗಳನ್ನು ಉಡಾಯಿಸಿದ್ದರು.

ಬಿಗ್ ಬಾಶ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್‌ ಪರ ಆಡಲು ಪೀಟರ್ ಹ್ಯಾಂಡ್ಸ್‌ಕಾಂಬ್‌ರನ್ನು ತಂಡದಿಂದ ಬಿಡುಗಡೆಗೊಳಿಸಲಾಗಿದೆ.

 ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಕ್ರೆಗ್ ಒವರ್ಟನ್ ಗಾಯದ ಸಮಸ್ಯೆಯಿಂದಾಗಿ 4ನೇ ಪಂದ್ಯ ಆಡುತ್ತಿಲ್ಲ. ಅವರ ಬದಲಿಗೆ ಟಾಮ್ ಕ್ಯೂರ್ರನ್ ಆಯ್ಕೆಯಾಗಿದ್ದಾರೆ.

ತಂಡಗಳು

►ಆಸ್ಟ್ರೇಲಿಯ: ಡೇವಿಡ್ ವಾರ್ನರ್, ಕ್ಯಾಮರೂನ್ ಬ್ಯಾಂಕ್ರಾಫ್ಟ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್(ನಾಯಕ), ಶಾನ್ ಮಾರ್ಷ್, ಮಿಚೆಲ್ ಮಾರ್ಷ್, ಟಿಮ್ ಪೈನ್(ವಿಕೆಟ್‌ಕೀಪರ್), ಪ್ಯಾಟ್ ಕಮಿನ್ಸ್, ನಥಾನ್ ಲಿಯೊನ್, ಜೋಶ್ ಹೇಝಲ್‌ವುಡ್, ಜಾಕ್ಸನ್ ಬರ್ಡ್.

►ಇಂಗ್ಲೆಂಡ್: ಅಲಿಸ್ಟರ್ ಕುಕ್, ಮಾರ್ಕ್ ಸ್ಟೋನ್‌ಮನ್, ಜೇಮ್ಸ್ ವಿನ್ಸಿ, ಜೋ ರೂಟ್(ನಾಯಕ), ಡೇವಿಡ್ ಮಲಾನ್, ಜಾನಿ ಬೈರ್‌ಸ್ಟೋವ್(ವಿಕೆಟ್‌ಕೀಪರ್), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಟಾಮ್ ಕ್ಯೂರ್ರನ್, ಸ್ಟುವರ್ಟ್ ಬ್ರಾಡ್, ಜಿಮ್ಮಿ ಆ್ಯಂಡರ್ಸನ್.

ಹೈಲೈಟ್ಸ್

►2010-11ರಲ್ಲಿ ಇಂಗ್ಲೆಂಡ್ ತಂಡ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿತ್ತು. ಆಗ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 98 ರನ್‌ಗೆ ಆಲೌಟಾಗಿತ್ತು. ಇನಿಂಗ್ಸ್ ಹಾಗೂ 57 ರನ್‌ಗಳಿಂದ ಸೋತಿತ್ತು.

► ಸ್ಟುವರ್ಟ್ ಬ್ರಾಡ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆದ ಇಂಗ್ಲೆಂಡ್‌ನ 2ನೇ ಬೌಲರ್ ಎನಿಸಿಕೊಳ್ಳಲು ಇನ್ನು ಏಳು ವಿಕೆಟ್ ಅಗತ್ಯವಿದೆ. ಜೇಮ್ಸ್ ಆ್ಯಂಡರ್ಸನ್ ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

►ಸ್ಟಾರ್ಕ್ 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ನಡೆದ ಹೆಚ್ಚಿನ ಎಲ್ಲ ಬಾಕ್ಸಿಂಗ್ ಡೇ ಟೆಸ್ಟ್‌ನಿಂದ ವಂಚಿತರಾಗಿದ್ದಾರೆ. ಕಳೆದ ವರ್ಷ ಪಾಕ್ ವಿರುದ್ಧ ಟೆಸ್ಟ್‌ನಲ್ಲಿ ಆಡಿದ್ದರು.

►ಸ್ಮಿತ್ 2013ರಲ್ಲಿ ಚೊಚ್ಚಲ ಟೆಸ್ಟ್ ಶತಕ ಗಳಿಸಿದ ಬಳಿಕ 48 ಟೆಸ್ಟ್ ಪಂದ್ಯಗಳಲ್ಲಿ 22 ಶತಕಗಳನ್ನು ಸಿಡಿಸಿದ್ದಾರೆ.

►ಆಸ್ಟ್ರೇಲಿಯದ ಆಫ್-ಸ್ಪಿನ್ನರ್ ನಥಾನ್ ಲಿಯೊನ್ 2017ರಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲು ಸಜ್ಜಾಗಿದ್ದಾರೆ. ಪ್ರಸ್ತುತ ಅವರು 60 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ದಕ್ಷಿಣ ಆಫ್ರಿಕದ ವೇಗಿ ಕಾಗಿಸೊ ರಬಾಡ ಈ ವರ್ಷ ಒಟ್ಟು 54 ವಿಕೆಟ್‌ಗಳನ್ನು ಕಬಳಿಸಿ 2ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News