ಬ್ಯಾರಿ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ: ಸಚಿವ ರೈ

Update: 2017-12-26 12:14 GMT

ಮಂಗಳೂರು, ಡಿ.26: ಬ್ಯಾರಿ ಸಾಹಿತ್ಯ ಅಕಾಡಮಿಯ ನಿಕಟಪೂರ್ವ ಅವಧಿಯಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಪ್ರಯತ್ನ ಸಾಗಿಸಿದ್ದು, ಹಾಲಿ ಅವಧಿಯ ಅಧ್ಯಕ್ಷ ಮತ್ತು ಸದಸ್ಯರು ಬ್ಯಾರಿ ಭವನ ನಿರ್ಮಾಣಕ್ಕೆ ಮುಂದಾದರೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಪುರಭವನದಲ್ಲಿ ನಡೆದ 'ಬ್ಯಾರಿ ಸಾಂಸ್ಕೃತಿಕ ಸಂಭ್ರಮ' ಮತ್ತು ನೂತನ ಅಧ್ಯಕ್ಷರು-ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ದಫ್ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದ.ಕ. ಜಿಲ್ಲೆಯು ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಯಕ್ಷಗಾನ ಹೀಗೆ ಅಕಾಡಮಿಗಳ ಶಕ್ತಿ ಕೇಂದ್ರವಾಗಿದೆ. ಅಧ್ಯಕ್ಷರು-ಸದಸ್ಯರನ್ನು ನೇಮಕ ಮಾಡುವಾಗ ದ.ಕ. ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಅಪವಾದವಿದೆ. ಆದರೆ, ಈ ಬಾರಿ ಸದಸ್ಯರನ್ನು ನೇಮಕ ಮಾಡುವಾಗ ಸರಕಾರ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಿದೆ. ಆ ಮೂಲಕ ಅಕಾಡಮಿಯು ಒಂದೇ ಜಿಲ್ಲೆಗೆ ಸೀಮಿತ ಅಲ್ಲ ಎಂಬುದನ್ನೂ ಸಾಬೀತು ಮಾಡಿದೆ ಎಂದ ಸಚಿವ ರೈ, ಅಕಾಡಮಿ ರಚನೆಯಾದ ಬಳಿಕ ಬ್ಯಾರಿ ಭಾಷೆಯ ಗೌರವ ಹೆಚ್ಚಿದೆ. ಹಾಗಾಗಿ ಹಾಲಿ ಅವಧಿಯ ಸದಸ್ಯರು ಹೆಚ್ಚೆಚ್ಚು ಕೆಲಸ ಮಾಡಿ ಕೀರ್ತಿ ಪಡೆಯಬೇಕು ಎಂದು ಕರೆ ನೀಡಿದರು.

ಅಕಾಡಮಿಯ ನೂತನ ಅಧ್ಯಕ್ಷ ಕರಂಬಾರು ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವ ಬಿ.ಎ.ಮೊಹಿದಿನ್, ಶಾಸಕರಾದ ಜೆ.ಆರ್.ಲೋಬೊ, ಕೆ.ಅಭಯಚಂದ್ರ ಜೈನ್, ಐವನ್ ಡಿಸೋಜ, ಬಿ.ಎ. ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ. ಮೋನು, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎ.ಹಸನಬ್ಬ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಅಕಾಡಮಿಯ ಮಾಜಿ ಅಧ್ಯಕ್ಷರಾದ ಎಂ.ಬಿ. ಅಬ್ದುಲ್ ರಹ್ಮಾನ್, ಬಿ.ಎ. ಮುಹಮ್ಮದ್ ಹನೀಫ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಭಾಗವಹಿಸಿದ್ದರು.

ರಾಜ್ಯ ವಸತಿ ನಿಗಮದ ಅಧ್ಯಕ್ಷ ಎ.ಎನ್. ಮಹೇಶ್, ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಸದಸ್ಯರಾದ ಎಂ.ಎಸ್.ಮುಹಮ್ಮದ್, ಶಾಹುಲ್ ಹಮೀದ್, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಬೆಳ್ತಂಗಡಿ, ಡಾ.ಡಿ.ಎಲ್. ವಿಜಯಕುಮಾರ್, ಎಂ.ಎಲ್. ಮೂರ್ತಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಹೈದರ್ ಪರ್ತಿಪ್ಪಾಡಿ, ಅಕಾಡಮಿಯ ಸದಸ್ಯರಾದ ಹುಸೈನ್ ಕಾಟಿಪಳ್ಳ, ಬಶೀರ್ ಅಹ್ಮದ್ ಕಿನ್ಯ, ಪಿ.ಎಂ.ಹಸನಬ್ಬ ಮೂಡುಬಿದಿರೆ, ಮುಹಮ್ಮದ್ ಆರಿಫ್ ಪಡುಬಿದ್ರೆ, ಆಯಿಶಾ ಯು.ಕೆ. ಉಳ್ಳಾಲ, ಕೆ.ಎಂ.ಮುಹಮ್ಮದ್ ಅನ್ಸಾರ್ ಬೆಳ್ಳಾರೆ, ಮುಹಮ್ಮದ್ ತನ್ಸೀಫ್ ಕಿಲ್ಲೂರು ಉಪಸ್ಥಿತರಿದ್ದರು.

ಇಬ್ರಾಹೀಂ ಬಾತಿಷಾ ನೇತೃತ್ವದಲ್ಲಿ ಬ್ಯಾರಿ ಸಾಹಿತ್ಯ ಮತ್ತು ಸಂಗೀತ ಸಂಗಮ ಹಾಗೂ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಸದಸ್ಯ ಬಶೀರ್ ಬೈಕಂಪಾಡಿ ವಂದಿಸಿದರು. ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ.ಮಹಮ್ಮದಲಿ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News