ಅಕಾಡಮಿಯ ವೇದಿಕೆಯನ್ನು ‘ರಾಜಕೀಯ’ಕ್ಕೆ ಬಳಸಿಕೊಂಡ ಸಚಿವ ರೈ

Update: 2017-12-26 10:30 GMT

ಮಂಗಳೂರು, ಡಿ.26: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಂಡ ಘಟನೆ ಮಂಗಳವಾರ ನಡೆದಿದೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ನಗರದ ಪುರಭವನದಲ್ಲಿ ಹಮ್ಮಿಕೊಂಡ ಅಕಾಡಮಿಯ ನೂತನ ಅಧ್ಯಕ್ಷ-ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ರೈ ಆರಂಭದಲ್ಲಿ ಸಾಹಿತ್ಯ, ಭಾಷೆ, ಅಕಾಡಮಿಯ ಕುರಿತು ಮಾತನಾಡಿದರೆ ಬಳಿಕ ತನ್ನ ಭಾಷಣವನ್ನು ‘ರಾಜಕೀಯ’ಕ್ಕೆ ಬಳಸಿಕೊಂಡರು.

ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಹೆಚ್ಚು ಮುಸ್ಲಿಮರಿದ್ದಾರೆ. ಅಲ್ಲಿನ ಮುಸ್ಲಿಮರು ತನ್ನನ್ನು ಯಾವತ್ತೂ ಕೂಡ ಪರಕೀಯನಂತೆ ಕಾಣಲಿಲ್ಲ. ಇತರ ಪಕ್ಷಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಕೂಡ ಅಲ್ಲಿನ ಮುಸ್ಲಿಮರು ತನ್ನನ್ನೇ ಆಯ್ಕೆ ಮಾಡಿದ್ದಾರೆ. ತನ್ನ ವಿರುದ್ಧ ಮಾಜಿ ಶಾಸಕ ಕೆ.ಎಂ.ಇಬ್ರಾಹೀಂರನ್ನು ನಿಲ್ಲಿಸಿ ಸೋಲಿಸುವ ಪ್ರಯತ್ನ ಮಾಡಿದರೂ ಮುಸ್ಲಿಮರು ನನ್ನನ್ನು ಗೆಲ್ಲಿಸಿದರು. ಮುಸ್ಲಿಮರ ಈ ಋಣವನ್ನು ತೀರಿಸಲು ಅಸಾಧ್ಯ ಎಂದು ರೈ ನುಡಿದರು.

ನನ್ನ ಜಾತ್ಯತೀತ ನಿಲುವಿನ ಬಗ್ಗೆ ಯಾರಿಗೂ ಸಂಶಯಬೇಡ. ನನ್ನನ್ನು ಟೀಕಿಸುವವರು ಕೂಡ ನನ್ನನ್ನು ಜಾತಿವಾದಿ ಅಥವಾ ಕೋಮುವಾದಿ ಎನ್ನುವುದಿಲ್ಲ. ಬದಲಾಗಿ ತಾನು ಮುಸ್ಲಿಮರ ಪರ ಇದ್ದೇನೆ ಎನ್ನುತ್ತಾರೆ. ಇದು ನಾನೊಬ್ಬ ಜಾತ್ಯತೀತ ಎಂಬುದಕ್ಕೆ ಸಾಕ್ಷಿ ಎಂದ ಸಚಿವ ರೈ ಮತೀಯವಾದಿಗಳು ತಲೆ ಎತ್ತದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದರು.

ಕೇಂದ್ರದ ಸಚಿವರೊಬ್ಬರು ತನ್ನ ಸ್ಥಾನಕ್ಕೆ ತಕ್ಕುದಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಜಾತ್ಯತೀತರು, ಪ್ರಗತಿಪರರಿಗೆ ಅವರ ಅಪ್ಪ-ಅಮ್ಮ ಯಾರೂಂತ ಗೊತ್ತಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಜಾತ್ಯತೀತರಾದ ನಮಗೆ ನಮ್ಮ ಅಪ್ಪ-ಅಮ್ಮ ಯಾರೂಂತ ಚೆನ್ನಾಗಿ ಗೊತ್ತು. ಆದರೆ, ‘ಅವರ’ ಅಪ್ಪ-ಅಮ್ಮ ಯಾರೂಂತ ನಮಗೆ ಗೊತ್ತಿಲ್ಲ ಎಂದು ರೈ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News