ಉಡುಪಿ: ಐದು ದಿನಗಳ ಆಧಾರ್ ಅದಾಲತ್‌ಗೆ ಚಾಲನೆ

Update: 2017-12-26 10:35 GMT

ಉಡುಪಿ, ಡಿ.26: ಬೆಂಗಳೂರು ಇ -ಆಡಳಿತ ಇಲಾಖೆ ಹಾಗೂ ಉಡುಪಿ ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಮಣಿಪಾಲದಲ್ಲಿರುವ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ಐದು ದಿನಗಳ ಆಧಾರ್ ಅದಾಲತ್ ಆಯೋಜನೆಯನ್ನು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಇಂದು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಈವರೆಗೆ ಆಧಾರ್ ಕಾರ್ಡ್ ಮಾಡದವರು ಈ ಆದಾಲತ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೊಂದಿರುವ ಆಧಾರ್ ಕಾರ್ಡ್‌ನಲ್ಲಿ ಯಾವುದೇ ಲೋಪಗಳಿದ್ದರೂ ಅದನ್ನು ತಿದ್ದುಪಡಿ ಮಾಡಿಕೊಳ್ಳಲು ಕೂಡ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಡಿ.30ರ ವರೆಗೆ ನಡೆಯುವ ಈ ಅದಾಲತ್‌ನ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಮತದಾರರ ಕರಡುಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದರೆ ಸೇರಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕು. ಕ್ಷೇತ್ರ ಬದಲಾವಣೆ ಮಾಡಿ ಕೊಳ್ಳಲು ಕೂಡ ಡಿ.29ರ ವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

2018ರ ಜ.1ಕ್ಕೆ 18 ವರ್ಷ ತುಂಬುವ ಯುವಕ -ಯುವತಿಯರು ಮತ ದಾರರ ಪಟ್ಟಿಗೆ ಸೇರ್ಪಡೆಗೆ ನೋಂದಣಿ ಮಾಡಿಕೊಳ್ಳಬೇಕು. ಇವರನ್ನು ಶತಮಾನದ ಮತದಾರರ ಎಂಬುದಾಗಿ ಗುರುತಿಸಿ ಜ.25ರಂದು ನಡೆಯುವ ಮತದಾರರ ದಿನಾಚರಣೆಯಂದು ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಅಧಿಕಾರಿ ಹಾಗೂ ಸಾಮಾಜಿ ಭದ್ರತೆ ವಿಭಾಗದ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ಪಿಂಚಣಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮಾಡಿಸಿ ಅದನ್ನು ಬ್ಯಾಂಕ್ ಖಾತೆಗೆ ಜೋಡಿಸಬೇಕು. ಈಗ ಅಂಚೆಯ ಮೂಲಕ ಬರುವ ಪಿಂಚಣಿ ಮುಂದೆ ನೇರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ತೀರಾ ವೃದ್ಧರು ಮತ್ತು ಅಂಗವಿಕಲರು ಹೊರತು ಪಡಿಸಿ ಉಳಿದವರು ಆಧಾರ್ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಈ ಆದಾಲತ್‌ನಲ್ಲಿ ಹೊಸ ನೋಂದಣಿ ಮತ್ತು ತಿದ್ದುಪಡಿಗಾಗಿ ತಲಾ ಎರಡೆರಡು ಕಂಪ್ಯೂಟರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಒಂದು ಕಂಪ್ಯೂಟರ್ ನಲ್ಲಿ ದಿನಕ್ಕೆ 35ರಂತೆ ಎರಡರಲ್ಲಿ ಒಟ್ಟು 70 ನೋಂದಣಿ ಮಾಡಲು ಮಾತ್ರ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಗ್ರಾಪಂಗಳಲ್ಲೂ ಆಧಾರ್ ನೋಂದಣಿ
 ಪ್ರಸ್ತುತ ತಾಲ್ಲೂಕು ಕಚೇರಿಯಲ್ಲಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಹೊಸ ಆಧಾರ್ ಕಾರ್ಡ್ ನೋಂದಣಿ ಮಾಡಲು ಅವಕಾಶ ಇದ್ದು, ಇಲ್ಲಿ ತಿದ್ದುಪಡಿ ಮಾಡುವುದಿಲ್ಲ. ಮುಂದೆ ಪ್ರತಿ ಗ್ರಾಪಂ ಕಚೇರಿಗಳಲ್ಲಿ ಆಧಾರ್ ನೋಂದಣಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸಾಮಾಜಿ ಭದ್ರತೆ ವಿಭಾಗದ ಸಹಾಯಕ ನಿರ್ದೇಶಕ ನಾಗರಾಜ್ ತಿಳಿಸಿದರು.

ಉಡುಪಿ ಜಿಲ್ಲೆಯ 34 ಅಂಚೆ ಕಚೇರಿಗಳು ಹಾಗೂ 14 ಬ್ಯಾಂಕ್ ಶಾಖೆಗಳಲ್ಲಿ ಆಧಾರ್‌ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸುವ ಯೋಜನೆ ಸರಕಾರದ ಮುಂದೆ ಇದ್ದು, ಮುಂದೆ ಬ್ಯಾಂಕ್ ಶಾಖೆ ಮತ್ತು ಅಂಚೆ ಕಚೇರಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಅವರು ಹೇಳಿದರು.

ಉಡುಪಿ ಜಿಲ್ಲೆಯ 34 ಅಂಚೆ ಕಚೇರಿಗಳು ಹಾಗೂ 14 ಬ್ಯಾಂಕ್ ಶಾಖೆಗಳಲ್ಲಿ ಆಧಾರ್‌ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸುವ ಯೋಜನೆ ಸರಕಾರದ ಮುಂದೆ ಇದ್ದು, ಮುಂದೆ ಬ್ಯಾಂಕ್ ಶಾಖೆ ಮತ್ತು ಅಂಚೆ ಕಚೇರಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಕಚೇರಿ ಅಧೀಕ್ಷಕ ಸಂಪತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News