ಡಿ.28- ಜ.1ರವರೆಗೆ ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ರೋವರ್ಸ್- ರೇಂಜರ್ಸ್ ಸಮಾವೇಶ

Update: 2017-12-26 10:54 GMT

ಮಂಗಳೂರು, ಡಿ.26: ರಾಷ್ಟ್ರ ಮಟ್ಟದ ರೋವರ್ಸ್ ರೇಂಜರ್ಸ್ ಸಮಾವೇಶ ಡಿ.28ರಿಂದ ಜ.1ರವರೆಗೆ ನಗರದ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯರ್ಶಿ ಯು.ಗೋಪಾಲಕೃಷ್ಣ ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

17ರಿಂದ 24ರ ಹರೆಯದ ಕಾಲೇಜು ವಿದ್ಯಾರ್ಥಿಗಳಿಂದ ಕೂಡಿದ ರೋವರ್ಸ್ ರೇಂಜರ್ಸ್ ಸಮಾವೇಶದಲ್ಲಿ ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ರಾಜ್ಯ ಪುರಸ್ಕೃತ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ಮೂರು ತಂಡಗಳಲ್ಲಿ ಮೂರು ದಿನಗಳ ಕಾಲ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ವಿ.ಪಿ. ದೀನ ದಯಾಳ ನಾಯ್ಡು ಅವರ ಶತಮಾನೋತ್ಸವದ ಸ್ಮರಣಾರ್ಥ ಸಮಾವೇಶ ನಡೆಯಲಿದ್ದು, ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಸೂಕ್ತ ವಾಸ್ತವ್ಯ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪ್ರತಿ ತಂಡವು ಬೆಳಗ್ಗಿನ ಹೊತ್ತು ಒಂದು ದಿನ ಸ್ಥಳೀಯ ಟ್ರೆಕ್ಕಿಂಗ್ ಕಾರ್ಯಕ್ರಮದಂತೆ ಸುಲ್ತಾನ್ ಬತ್ತೇರಿ, ಪ್ರಾಕೃತಿಕ ಟ್ರೆಕ್ಕಿಂಗ್‌ನಡಿ ಪಿಲಿಕುಳ ನಿಸರ್ಗಧಾಮ ಹಾಗೂ ಮತ್ತೊಂದು ತಂಡ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದೆ.

ಮಧ್ಯಾಹ್ನದ ವೇಳೆ ವಿವಿಧ ಸ್ಪರ್ಧೆಗಳಲ್ಲಿ ತಂಡಗಳು ಭಾಗವಹಿಸಲಿವೆ. ಹೊರ ರಾಜ್ಯಗಳಿಂದ ಬಂದಿರುವ ತಂಡಗಳು ತಮ್ಮ ರಾಜ್ಯದ ಜಾನಪದ ಕಲೆಗಳನ್ನು ಪ್ರದರ್ಶಿಸಲಿವೆ. ಇದೇ ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳೀಯ ಜಾನಪದ ಕಲೆಯ ಪ್ರದರ್ಶನದ ಅಂಗವಾಗಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಯಕ್ಷಗಾನ ಪ್ರದರ್ಶನಕ್ಕೆ ಸಹಕಾರವನ್ನು ನೀಡುತ್ತಿದೆ ಎಂದವರು ವಿವರಿಸಿದರು.

ಸಮ್ಮೇಳನದಲ್ಲಿ ಏರ್ ರೋವರಿಂಗ್, ಏರ್ ರೇಂಜರ್, ಓಪನ್ ಗೈಡ್ ಯುನಿಟ್ ಹಾಗೂ ಅಲೋಶಿಯಸ್ ಐಟಿಐನಲ್ಲಿ ರವರ್ ಯುನಿಟ್ ಈ ನಾಲ್ಕು ಪ್ರತ್ಯೇಕ ಘಟಕಗಳ ಉದ್ಘಾಟನೆ ನಡೆಯಲಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತರಾದ ಡಾ. ಎನ್.ಜಿ. ಮೋಹನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೋಶಾಧಿಕಾರಿ ವಾಸುದೇವ ಬೋಳೂರು, ಶತಮಾನೋತ್ಸವ ಸಂಭ್ರಮಾಚರಣೆಯ ಸಂಚಾಲಕ ಎಂ.ಎ.ಚೇಳಯ್ಯ, ಅನಲೇಂದ್ರ ಶರ್ಮಾ, ಪ್ರಭಾಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News