​ಹೆದ್ದಾರಿ ದುರಸ್ತಿಯಾಗದಿದ್ದರೆ ಪಿಐಎಲ್: ಇಂಟಕ್‌ನಿಂದ ಒಂದು ವಾರದ ಗಡುವು

Update: 2017-12-26 11:03 GMT

ಮಂಗಳೂರು, ಡಿ.26: ಬೈಕಂಪಾಡಿ, ಪಣಂಬೂರು, ಸುರತ್ಕಲ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ರಸ್ತೆ ದುರಸ್ತಿ ಕುರಿತಂತೆ ಸಂಸದರು ನೀಡಿರುವ ಭರವಸೆ ಹುಸಿಯಾಗಿದೆ. ಆದ್ದರಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗುವುದು ಎಂದು ಇಂಟಕ್ ರಾಜ್ಯ ಕಾರ್ಯದರ್ಶಿ ಪಿ.ಕೆ. ಸುರೇಶ್ ತಿಳಿಸಿದ್ದಾರೆ.

ಈಗಾಗಲೇ ಹೆದ್ದಾರಿ ದುರಸ್ತಿ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಸಂಸದರಿಗೆ ಮನವಿ ಮಾಡಲಾಗಿದೆ. ಹೆದ್ದಾರಿ ದುರಸ್ತಿಗೆ 8 ಕೋಟಿ ರೂ. ಬಿಡುಗಡೆಯಾಗಿದ್ದು, ಡಿ.15ರೊಳಗೆ ಕಾಮಗಾರಿ ಆರಂಭಿಸಲಾಗುತ್ತದೆ ಎಂಬ ಭರವಸೆ ಸಿಕ್ಕಿತ್ತು. ಆದರೆ ಇನ್ನೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ವರ್ಷಾಂತ್ಯದೊಳಗೆ ದುರಸ್ತಿ ಮಾಡದಿದ್ದರೆ ಜ.1ರಿಂದ ಹೆದ್ದಾರಿ ಬಂದ್ ಮಾಡಿ ಧರಣಿ ಮಾಡುವುದರೊಂದಿಗೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.

ಬಿ.ಸಿ.ರೋಡ್‌ನಿಂದ ಪಡುಬಿದ್ರೆಯವರೆಗೆ 3 ಕಡೆ ಟೋಲ್ ಸಂಗ್ರಹಿಸಲಾಗುತ್ತಿದೆ. ಆದರೆ ರಸ್ತೆ ಸರಿಪಡಿಸುವ ಸೌಜನ್ಯ ಹೆದ್ದಾರಿ ಇಲಾಖೆಯಾಗಲಿ, ಸಂಸದರಾಗಲಿ ತೋರಿಸುತ್ತಿಲ್ಲ. ಸಾರ್ವಜನಿಕರ ಅಭದ್ರತೆಯ ವಿಚಾರಗಳಿಗೆ ಸ್ಪಂದಿಸದ ಹೆದ್ದಾರಿ ಇಲಾಖೆ ಇದ್ದೇನು ಪ್ರಯೋಜನ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಯ್ದೆ 1988ರ ಸೆಕ್ಷನ್ 31(1)ರ ಪ್ರಕಾರ ಎನ್‌ಎಚ್‌ಎಐಗೆ ರಸ್ತೆ ರಿಪೇರಿ ಮಾಡುವುದು ಅಸಾಧ್ಯವಾದರೆ ಖಾಸಗಿಯವರಿಗೆ ನೀಡಿ ದುರಸ್ತಿ ಮಾಡಿಸಬಹುದುದಾಗಿದೆ. ಆದರೆ ಇದನ್ನೂ ಇಲಾಖೆ ಮಾಡುತ್ತಿಲ್ಲ. ಆದ್ದರಿಂದ ಸಾರ್ವಜನಿಕರು, ವಾಹನ ಸವಾರರು, ಬಸ್-ಆಟೋ, ಟ್ಯಾಕ್ಸಿ ಚಾಲಕ-ಮಾಲಕರೊಂದಿಗೆ ಸೇರಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದರು.
ಇಂಟಕ್ ದ.ಕ. ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಸ್ಟೀವನ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News