ಜಾಧವ್ ತೀವ್ರ ದಬ್ಬಾಳಿಕೆ ಎದುರಿಸುತ್ತಿದ್ದಂತೆ ಭಾಸವಾಗಿದೆ: ಭಾರತ

Update: 2017-12-26 14:19 GMT

ಹೊಸದಿಲ್ಲಿ, ಡಿ.26: ಭಾರತೀಯ ಸಂಜಾತ ಕುಲ್‌ಭೂಷಣ್ ಜಾಧವ್ ರನ್ನು ಅವರ ಕುಟುಂಬದ ಜೊತೆ ಪಾಕಿಸ್ತಾನ ಭೇಟಿ ಮಾಡಿಸಿದ ರೀತಿ ಎರಡು ದೇಶಗಳ ನಡುವಿನ ಹೊಂದಾಣಿಕೆಯ ಸ್ಫೂರ್ತಿಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಭಾರತ ಜಾಧವ್ ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವ್ಯಕ್ತಪಡಿಸಿದೆ. ಈ ಭೇಟಿಯ ಬಗ್ಗೆ ನಮಗೆ ಸಿಕ್ಕ ಮಾಹಿತಿಯ ಪ್ರಕಾರ ಜಾಧವ್ ತೀವ್ರ ದಬ್ಬಾಳಿಕೆಯನ್ನು ಎದುರಿಸುತ್ತಿದ್ದಂತೆ, ಒತ್ತಡದ ವಾತಾವರಣದಲ್ಲಿ ಮಾತನಾಡುತ್ತಿದ್ದಂತೆ ಭಾಸವಾಗುತ್ತಿತ್ತು ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ಅತೀಹೆಚ್ಚು ಭದ್ರತೆ ಹೊಂದಿದ್ದ ಕಟ್ಟಡದಲ್ಲಿ ಜಾಧವ್ ರನ್ನು ಅವರ ತಾಯಿ ಮತ್ತು ಪತ್ನಿ ಭೇಟಿಯಾದ ಮರುದಿನ ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.

  ಜಾಧವ್ ಮತ್ತು ಅವರ ಕುಟುಂಬ ಸದಸ್ಯರ ಮಧ್ಯೆ ಗಾಜಿನ ಪರದೆಯಿದ್ದು ಅವರು ಇಂಟರ್‌ಕಾಮ್ ಮೂಲಕ ಮಾತುಕತೆ ನಡೆಸಿದ್ದರು. ಜಾಧವ್ ಆಡಿದ ಬಹುತೇಕ ಮಾತುಗಳು ಯಾರೋ ಹೇಳಿಕೊಟ್ಟಂತಿತ್ತು ಮತ್ತು ಪಾಕಿಸ್ತಾನದಲ್ಲಿ ಅವರ ಚಟುವಟಿಕೆಗಳನ್ನು ತಪ್ಪಾಗಿ ವಿವರಿಸಲು ರೂಪಿಸಿದಂತಿತ್ತು. ಅವರ ದೈಹಿಕ ತೋರಿಕೆ ಕೂಡಾ ಅವರ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಸಚಿವಾಲಯ ತಿಳಿಸಿದೆ. ಭೇಟಿಗೂ ಮುನ್ನ ಅದರ ರೂಪುರೇಷೆ ಮತ್ತು ಸಾಧ್ಯತೆಗಳನ್ನು ಚರ್ಚಿಸುವ ಸಲುವಾಗಿ ಎರಡು ದೇಶಗಳ ಸರಕಾರಗಳು ರಾಜತಾಂತ್ರಿಕ ಮೂಲಗಳ ಮೂಲಕ ಸಂಪರ್ಕದಲ್ಲಿತ್ತು. ಎರಡು ದೇಶಗಳ ಮಧ್ಯೆ ಈ ಬಗ್ಗೆ ಸ್ಪಷ್ಟ ಹೊಂದಾಣಿಕೆಯಿತ್ತು ಮತ್ತು ಭಾರತವು ತನ್ನ ಎಲ್ಲಾ ಬದ್ಧತೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿದೆ. ಆದರೆ ಪಾಕಿಸ್ತಾನ ಈ ಭೇಟಿಯನ್ನು ಏರ್ಪಡಿಸಿರುವ ರೀತಿ ಮಾತ್ರ ಹೊಂದಾಣಿಕೆಯ ಸ್ಫೂರ್ತಿಯನ್ನು ಅತ್ಯಂತ ನಿಷ್ಠುರವಾಗಿ ಉಲ್ಲಂಘಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಭದ್ರತಾ ಮುನ್ನೆಚ್ಚರಿಕೆಯ ನೆಪದಲ್ಲಿ ಜಾಧವ್ ರನ್ನು ಭೇಟಿಯಾಗುವ ಸಂದರ್ಭದಲ್ಲಿ ಅವರ ಪತ್ನಿಗೆ ತಮ್ಮ ಮಂಗಳಸೂತ್ರ, ಬಳೆಗಳು ಮತ್ತು ಹಣೆಯ ಬೊಟ್ಟನ್ನು ತೆಗೆಯುವಂತೆ ಸೂಚಿಸಲಾಗಿದೆ ಜೊತೆಗೆ ಭದ್ರತೆಗೆ ಸಂಬಂಧವೇ ಇಲ್ಲದಿದ್ದರೂ ಧರಿಸಿದ್ದ ಬಟ್ಟೆಯನ್ನೂ ಬದಲಾಯಿಸುವಂತೆ ತಿಳಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಜಾಧವ್ ತಾಯಿ ಅವರ ಮಾತೃಭಾಷೆ ಮರಾಠಿಯಲ್ಲಿ ಮಾತನಾಡಲು ಮುಂದಾದಾಗ ಅವರನ್ನು ತಡೆಯಲಾಗಿದೆ. ಇದು ಜಾಧವ್ ಪತ್ನಿ ಮತ್ತು ತಾಯಿಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಮನೋಭಾವಕ್ಕೆ ಧಕ್ಕೆಯುಂಟುಮಾಡಿದೆ ಎಂದು ಸಚಿವಾಲಯ ಆರೋಪಿಸಿದೆ.

ಸುಷ್ಮಾ ಸ್ವರಾಜ್‌ರನ್ನು ಭೇಟಿಯಾದ ಜಾದವ್ ಕುಟುಂಬ

ಡಿಸೆಂಬರ್ 25ರಂದು ಇಸ್ಲಾಮಾಬಾದ್‌ನಲ್ಲಿ ಕುಲ್‌ಭೂಷಣ್ ಜಾದವ್‌ರನ್ನು ಭೇಟಿಯಾದ ಅವರ ತಾಯಿ ಮತ್ತು ಪತ್ನಿ ಮಂಗಳವಾರ, ಡಿ. 26ರಂದು ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ನಿವಾಸದಲ್ಲಿ ಭೇಟಿಯಾದರು. ಈ ವೇಳೆ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳೂ ಉಪಸ್ಥಿತರಿದ್ದರು.

ಈ ವೇಳೆ ಜಾಧವ್ ಕುಟುಂಬಸ್ಥರು ಇಸ್ಲಾಮಾಬಾದ್‌ನಲ್ಲಿ ತಮಗಾದ ಅನುಭವದ ಬಗ್ಗೆ ಸಚಿವೆಗೆ ವಿವರಿಸಿದ್ದು ಪಾಕಿಸ್ತಾನವು ತಮ್ಮ ಜೊತೆ ಕ್ರೂರ ಹಾಸ್ಯ ಮಾಡಿದೆ ಎಂದು ಆರೋಪಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ. ಭಾರತ ಐಸಿಜೆಯಲ್ಲಿ ಜಾಧವ್ ಬಿಡುಗಡೆಗಾಗಿ ಮನವಿ ಮಾಡಲಿದೆ

ಕುಲ್‌ಭೂಷಣ್ ಜಾಧವ್ ರನ್ನು ಪಾಕಿಸ್ತಾನದ ಸೇನಾ ನ್ಯಾಯಾಲಯವು ಸುಳ್ಳು ಆರೋಪಗಳ ಆಧಾರದಲ್ಲಿ ಮರಣದಂಡನೆಗೆ ಗುರಿಯಾಗಿಸಿದ್ದು ಇದನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸುವುದನ್ನು ಮುಂದುವರಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜಾಧವ್ ಭಾರತ ಪ್ರಾಯೋಜಿತ ಭಯೋತ್ಪಾದನೆಯ ಮುಖ ಎಂದು ಪಾಕಿಸ್ತಾನ ಸೋಮವಾರದಂದು ಮತ್ತೊಮ್ಮೆ ಹೇಳಿಕೆ ನೀಡಿದೆ.

ಇದು ಕೊನೆಯ ಭೇಟಿಯಲ್ಲ: ಪಾಕಿಸ್ತಾನ

ಕುಲ್‌ಭೂಷಣ್ ಜಾಧವ್ ಮತ್ತವರ ಕುಟುಂಬ ನಡುವಿನ ಭೇಟಿಯ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪಾಕಿಸ್ತಾನ ಸರಕಾರದ ಪ್ರತಿನಿಧಿಗಳು, ಜಾಧವ್ ರನ್ನು ಭಾರತದ ಭಯೋತ್ಪಾದನೆಯ ಮುಖ ಎಂದು ಕರೆದಿದ್ದಾರೆ. ಆದರೆ ಜಾಧವ್ ಮತ್ತವರ ಕುಟುಂಬದ ಮಧ್ಯೆ ಇದುವೇ ಕೊನೆಯ ಭೇಟಿಯಲ್ಲ, ಜಾಧವ್ ರಿಗೆ ರಾಯಭಾರ ಸಂಪರ್ಕವನ್ನು ಒದಗಿಸುವ ಬಗ್ಗೆಯೂ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News