ಎನ್‌ಸಿಪಿ ಪ್ರ.ಕಾರ್ಯದರ್ಶಿ ತಾರಿಕ್ ಅನ್ವರ್ ಅಸ್ವಸ್ಥ
Update: 2017-12-26 20:01 IST
ಪಾಟ್ನಾ,ಡಿ.26: ಎನ್‌ಸಿಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಕೇಂದ್ರ ಸಚಿವ ತಾರಿಕ್ ಅನ್ವರ್ ಅವರು ಸೋಮವಾರ ತನ್ನ ಲೋಕಸಭಾ ಕ್ಷೇತ್ರವಾದ ಕಟಿಹಾರ್‌ನಲ್ಲಿದ್ದಾಗ ಅಸ್ವಸ್ಥಗೊಂಡಿದ್ದು, ಸ್ಥಳೀಯ ರೈಲ್ವೆ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದು ಏರ್ ಆ್ಯಂಬುಲೆನ್ಸ್ ಮೂಲಕ ದಿಲ್ಲಿಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಅನ್ವರ್ ಮಂಗಳವಾರ ಪಾಟ್ನಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದರು. ಆದರೆ ಅವರ ಅನಾರೋಗ್ಯದಿಂದಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಎನ್‌ಸಿಪಿ ವಕ್ತಾರ ಅನಿಲ ಕಿಶೋರ ಝಾ ಅವರು ಇಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದರು.
66ರ ಹರೆಯದ ಅನ್ವರ್ ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ ಸಹಾಯಕ ಕೃಷಿ ಮತ್ತು ಆಹಾರ ಸಂಸ್ಕರಣೆ ಸಚಿವರಾಗಿದ್ದರು.