ಎಚ್-1ಬಿ ವೀಸಾ ಕಾರ್ಯಕ್ರಮಕ್ಕೆ ತಿದ್ದುಪಡಿ: ಟ್ರಂಪ್ ಆಡಳಿತ ಪ್ರಸ್ತಾಪ

Update: 2017-12-26 16:37 GMT

ವಾಶಿಂಗ್ಟನ್, ಡಿ. 26: ಎಚ್-1ಬಿ ವೀಸಾ ಕಾರ್ಯಕ್ರಮದನ್ವಯ ವಿದೇಶೀ ಉದ್ಯೋಗಿಗಳನ್ನು ನೇಮಿಸಲು ಮುಂದಾಗುವ ಉದ್ಯೋಗದಾತರು ತಮ್ಮನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕೆಂದು ಹೇಳುವ 2011ರ ನಿಯಮವೊಂದನ್ನು ಜಾರಿಗೆ ತರಲು ಅಮೆರಿಕದ ಟ್ರಂಪ್ ಆಡಳಿತ ಯೋಚಿಸುತ್ತಿದೆ.

ನೂತನ ನಿಯಮದನ್ವಯ, ಅಮೆರಿಕದ ಕಂಪೆನಿಗಳು ವೀಸಾಗಳಿಗಾಗಿ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಪ್ರತಿ ವರ್ಷ 85,000 ಎಚ್-1ಬಿ ವೀಸಾಗಳನ್ನು ಅಮೆರಿಕ ನೀಡುತ್ತದೆ. ಈ ಪೈಕಿ 65,000 ವೀಸಾಗಳನ್ನು ವಿದೇಶಗಳಿಂದ ಬರುವ ವಿದೇಶೀಯರಿಗೆ ನೀಡಿದರೆ, 20,000 ವೀಸಾಗಳನ್ನು ಅಮೆರಿಕದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿರುವ ವಿದೇಶೀಯರಿಗೆ ನೀಡಲಾಗುತ್ತದೆ.

ಹೀಗೆ ನೋಂದಾಯಿಸಿಕೊಳ್ಳುವ ಉದ್ಯೋಗದಾತರನ್ನು ಎಚ್-1ಬಿ ವೀಸಾ ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಯುನೈಟೆಡ್ ಸ್ಟೇಟ್ಸ್ ಸಿಟಿಝನ್‌ಶಿಪ್ ಆ್ಯಂಡ್ ಇಮಿಗ್ರೇಶನ್ ಸರ್ವಿಸಸ್ (ಯುಎಸ್‌ಸಿಐಎಸ್) ಇಲೆಕ್ಟ್ರಾನಿಕ್ ಲಾಟರಿ ಮೂಲಕ ಆರಿಸುತ್ತದೆ.

ನೂತನ ವ್ಯವಸ್ಥೆಯಿಂದ ಎಚ್-1ಬಿ ಉದ್ಯೋಗಿಗಳನ್ನು ಆರಿಸಲು ಅಮೆರಿಕದ ಉದ್ಯೋಗದಾತರಿಗೆ ಕಷ್ಟವಾಗುತ್ತದೆಯೇ, ಸುಲಭವಾಗುತ್ತದೆಯೇ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ. ಉದ್ಯೋಗದಾತರ ಪಟ್ಟಿಯಲ್ಲಿ ಇನ್‌ಫೋಸಿಸ್, ಟಿಸಿಎಸ್ ಮತ್ತು ವಿಪ್ರೊ ಮುಂತಾದ ಭಾರತೀಯ ಕಂಪೆನಿಗಳ ಅಮೆರಿಕನ್ ಸಹ ಸಂಸ್ಥೆಗಳೂ ಇರುತ್ತವೆ.

ಸುಮಾರು 70 ಶೇಕಡದಷ್ಟು ಎಚ್-1ಬಿ ಉದ್ಯೋಗಿಗಳು ಭಾರತದಿಂದಲೇ ಬರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News