×
Ad

ಜಾರ್ಖಂಡ್‌ನಲ್ಲಿ ಹಸಿವಿಗೆ ಮಹಿಳೆ ಬಲಿ: ಆರೋಪ

Update: 2017-12-26 23:04 IST

ಹೊಸದಿಲ್ಲಿ, ಡಿ.26: ಕೆಲದಿನಗಳ ಹಿಂದೆ ಹಸಿವಿನಿಂದ ಉಂಟಾದ ಸಾವಿಗೆ ರಾಜ್ಯ ಸರಕಾರವೇ ಹೊಣೆ ಎಂದು ಜಾರ್ಖಂಡ್ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಸರ್ಯೂ ರಾಯ್ ಒಪ್ಪಿಕೊಂಡ ಬೆರಳೆಣಿಕೆಯ ದಿನಗಳೊಳಗಾಗಿ ಆಧಾರ್ ಜೋಡಣೆಯಿಂದಾಗಿ ನಡೆದ ಅವಾಂತರದಲ್ಲಿ ಇನ್ನೊರ್ವ ವೃದ್ಧ ಮಹಿಳೆ ಹಸಿವಿನಿಂದ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನಿಂದ ವರದಿಯಾಗಿದೆ.

ಮೃತ ಮಹಿಳೆಯನ್ನು 64ರ ಹರೆಯದ ವಿಧವೆ ಪ್ರೇಮಾನಿ ಕುನ್ವರ್ ಎಂದು ಗುರುತಿಸಲಾಗಿದೆ. ಗಡ್ವಾ ಜಿಲ್ಲೆಯ ದಂಡಾ ಬ್ಲಾಕ್‌ನ ನಿವಾಸಿಯಾಗಿರುವ ಪ್ರೇಮಾನಿ ಕುನ್ವರ್ ಅವರ ಪಿಂಚಣಿಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಬೇರೊಬ್ಬರ ಖಾತೆಗೆ ವರ್ಗಾಯಿಸಿದ ಕಾರಣ ಆಕೆ ಡಿಸೆಂಬರ್ ಒಂದರಂದು ಹಸಿವಿನಿಂದ ಬಳಲಿ ಸಾವನ್ನಪ್ಪಿರುವುದಾಗಿ ರೈಟ್ ಟು ಫುಡ್ ಅಭಿಯಾನದ ಕಾರ್ಯಕರ್ತರು ತಿಳಿಸಿದ್ದಾರೆ.ಎಸ್‌ಬಿಐಯಲ್ಲಿರುವ ಪ್ರೇಮಾನಿ ಅವರ ಖಾತೆಗೆ ಸೆಪ್ಟೆಂಬರ್‌ವರೆಗೂ ಪಿಂಚಣಿ ಹಣ ಬೀಳುತ್ತಿತ್ತು. ಆದರೆ ಬ್ಯಾಂಕ್ ಆಕೆಗೆ ಅರಿವಿಲ್ಲದಂತೆ ಆಕೆಯ ಖಾತೆಗೆ ಸೇರುತ್ತಿದ್ದ ಹಣವನ್ನು ಪಿಪ್ರಕಲಾ ಶಾಖೆಯಲ್ಲಿ ಖಾತೆ ಹೊಂದಿದ್ದ ಶಾಂತಿದೇವಿ ಎಂಬಾಕೆಯ ಖಾತೆಗೆ ವರ್ಗಾಯಿಸಿದೆ. ಆದರೆ ಶಾಂತಿದೇವಿ 25 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ಪ್ರೇಮಾನಿಯವರ ಪತಿಯ ಮೊದಲ ಪತ್ನಿಯಾಗಿದ್ದರು ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಇದು ಆಧಾರ್-ಬ್ಯಾಂಕ್ ಸಂಯೋಜಿತ ವ್ಯವಸ್ಥೆಯ ಗೊಂದಲದಿಂದಾಗಿ ಸಂಭವಿಸಿದ ಸಾವು ಎಂದು ಅವರು ದೂರಿದ್ದಾರೆ.

ಈ ಬಗ್ಗೆ ಅಭಿಯಾನದ ಕಾರ್ಯಕರ್ತರು ಘಟನೆಯ ವಿವರವನ್ನು ಬಹಿರಂಗಪಡಿಸಿದ ನಂತರ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಡಿಸೆಂಬರ್ ಎಂಟರಂದು ತನಿಖೆ ನಡೆಸಿದೆ. ಪ್ರಾಧಿಕಾರವು ಬಿಡುಗಡೆ ಮಾಡಿದ ವರದಿಯಲ್ಲಿ ಪ್ರೇಮಾನಿ ಕುನ್ವರ್ ಅವರ ಆಧಾರ್ ಸಂಖ್ಯೆಯನ್ನು ಶಾಂತಿದೇವಿಯವರ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿದ್ದ ಕಾರಣ ಆಕೆಗೆ ಸೇರಬೇಕಿದ್ದ ಪಿಂಚಣಿ ಹಣ ಶಾಂತಿದೇವಿ ಖಾತೆಗೆ ಹೋಗುತ್ತಿದೆ ಎಂದು ಒಪ್ಪಿಕೊಂಡಿದೆ.

ರೇಶನ್ ಅಂಗಡಿಯಲ್ಲಿ ಪ್ರೇಮಾನಿಯವರ ಬೆರಳಚ್ಚು ದೃಢಪಟ್ಟಿದ್ದರೂ ಮತ್ತು ಆಕೆ 35 ಕಿಲೊ ರೇಶನ್ ಪಡೆದಿದ್ದಾರೆ ಎಂದು ದಾಖಲಿಸಲಾಗಿದ್ದರೂ ಆಕೆಗೆ ಮಾತ್ರ ನವೆಂಬರ್ ತಿಂಗಳ ರೇಶನ್ ಸಿಕ್ಕಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತನ್ನ ತಾಯಿ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಪ್ರೇಮಾನಿಯ ಮಗ ಉತ್ತಮ ಮಹ್ತೊ ದೃಡಪಡಿಸಿದ್ದರೂ ಸ್ಥಳೀಯಾಡಳಿತ ಮಾತ್ರ ಆಕೆಯ ಸಾವು ಅನಾರೋಗ್ಯದಿಂದ ಸಂಭವಿಸಿದೆ ಎಂದು ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News