ಏಕದಿನ ಸರಣಿ: ವಿಂಡೀಸ್ ವಿರುದ್ಧ ಕಿವೀಸ್ ಕ್ಲೀನ್ ಸ್ವೀಪ್ ಸಾಧನೆ

Update: 2017-12-26 18:12 GMT

ಕ್ರೈಸ್ಟ್‌ಚರ್ಚ್, ಡಿ.26: ಮಳೆಬಾಧಿತ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಝಿಲೆಂಡ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಡಿಎಲ್ ನಿಯಮದ ಪ್ರಕಾರ 66 ರನ್‌ಗಳಿಂದ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ.

ಮಂಗಳವಾರ ಇಲ್ಲಿ ನಡೆದ ಬಾಕ್ಸಿಂಗ್ ಡೇ ಏಕದಿನ ಪಂದ್ಯದಲ್ಲಿ ಟಾಸ್ ಜಯಿಸಿದ ನ್ಯೂಝಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮಳೆಯಿಂದಾಗಿ ವಿಳಂಬವಾದ ಪಂದ್ಯವನ್ನು 23 ಓವರ್‌ಗೆ ಕಡಿತಗೊಳಿಸಲಾಯಿತು. ಕಿವೀಸ್ ತಂಡ ರಾಸ್ ಟೇಲರ್(ಅಜೇಯ 47)ಹಾಗೂ ಟಾಮ್ ಲಥಾಮ್(37)4ನೇ ವಿಕೆಟ್‌ಗೆ ಸೇರಿಸಿದ 73 ರನ್ ಜೊತೆಯಾಟದ ನೆರವಿನಿಂದ 23 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 131 ರನ್ ಗಳಿಸಿತು.

   ಡಿಎಲ್ ನಿಯಮದಂತೆ ಗೆಲ್ಲಲು 161 ರನ್ ಪರಿಷ್ಕೃತ ಗುರಿ ಪಡೆದಿದ್ದ ವಿಂಡೀಸ್ 3.5 ನೇ ಓವರ್‌ನಲ್ಲಿ 9 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಏಕದಿನ ಕ್ರಿಕೆಟ್‌ನಲ್ಲಿ ಕನಿಷ್ಠ ಮೊತ್ತ ಗಳಿಸುವತ್ತ ಸಾಗಿತ್ತು. ನಾಯಕ ಜೇಸನ್ ಹೋಲ್ಡರ್(34), ನಿಕಿತ್ ಮಿಲ್ಲರ್(ಔಟಾಗದೆ 20) ಹಾಗೂ ಶಾನೊನ್ ಗ್ಯಾಬ್ರಿಯಲ್(ಔಟಾಗದೆ 12) ಪ್ರಯತ್ನದ ಫಲವಾಗಿ 9 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತು. 66 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಕಿವೀಸ್ ಬೌಲರ್‌ಗಳಾದ ಮಿಚೆಲ್ ಸ್ಯಾಂಟ್ನರ್(3-15) ಹಾಗೂ ಟ್ರೆಂಟ್ ಬೌಲ್ಟ್(3-18) ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಮ್ಯಾಟ್ ಹೆನ್ರಿ(2-18) ಎರಡು ವಿಕೆಟ್ ಪಡೆದರು.

ನ್ಯೂಝಿಲೆಂಡ್ ಮೊದಲ ಪಂದ್ಯವನ್ನು 5 ವಿಕೆಟ್‌ಗಳಿಂದ ಹಾಗೂ ಎರಡನೇ ಪಂದ್ಯವನ್ನು 204 ರನ್‌ಗಳಿಂದ ಗೆದ್ದುಕೊಂಡಿತ್ತು. ಆತಿಥೇಯ ಕಿವೀಸ್ ತಂಡ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಕ್ಲೀನ್‌ಸ್ವೀಪ್ ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರ್

►ನ್ಯೂಝಿಲೆಂಡ್: 23 ಓವರ್‌ಗಳಲ್ಲಿ 131/4

(ರಾಸ್ ಟೇಲರ್ ಔಟಾಗದೆ 47, ಲಥಾಮ್ 37, ಮುನ್ರೊ 21, ನಿಕೊಲಸ್ ಅಜೇಯ 18, ಕಾಟ್ರಿಯಲ್ 2-19, ಹೋಲ್ಡರ್ 1-21, ಮಿಲ್ಲರ್ 1-26)

►ವೆಸ್ಟ್‌ಇಂಡೀಸ್: 23 ಓವರ್‌ಗಳಲ್ಲಿ 99/9

(ಜೇಸನ್ ಹೋಲ್ಡರ್ 34, ಮಿಲ್ಲರ್ ಔಟಾಗದೆ 20, ಗ್ಯಾಬ್ರಿಯಲ್ ಔಟಾಗದೆ 12, ಬೌಲ್ಟ್ 3-18, ಸ್ಯಾಂಟ್ನರ್ 3-15)

►ಪಂದ್ಯಶ್ರೇಷ್ಠ: ರಾಸ್ ಟೇಲರ್,

►ಸರಣಿಶ್ರೇಷ್ಠ: ಟ್ರೆಂಟ್ ಬೌಲ್ಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News