ರಣಜಿ ಟ್ರೋಫಿ: ದಿಲ್ಲಿ ತಂಡದಲ್ಲಿ ಗಮನ ಸೆಳೆದ ಸೈನಿ

Update: 2017-12-26 18:21 GMT

ಹೊಸದಿಲ್ಲಿ, ಡಿ.26: ದಿಲ್ಲಿ ಕ್ರಿಕೆಟ್ ಕಳೆದ ಎರಡು ದಶಕಗಳಿಂದ ದೇಶದ ಕ್ರಿಕೆಟ್ ರಂಗಕ್ಕೆ ಹಲವು ಅತ್ಯುತ್ತಮ ಕ್ರಿಕೆಟಿಗರನ್ನು ಸಮರ್ಪಿಸಿದೆ.

 ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಶಿಖರ್ ಧವನ್ ಸೇರಿದಂತೆ ದಿಲ್ಲಿಯ ಹಲವು ಮಂದಿ ಖ್ಯಾತ ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.

ಇದೀಗ ದಿಲ್ಲಿ ತಂಡದಲ್ಲಿ ವೇಗದ ಬೌಲರ್ ಒಬ್ಬರು ಗಮನ ಸೆಳೆದಿದ್ದಾರೆ . ಅವರು ನವ್‌ದೀಪ್ ಸೈನಿ. 25ರ ಹರೆಯದ ವೇಗಿ ಸೈನಿ ಅವರು 9 ರಣಜಿ ಪಂದ್ಯಗಳಲ್ಲಿ 29 ವಿಕೆಟ್ ಪಡೆದಿದ್ದಾರೆ.

ಈ ತನಕ 29 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಸೈನಿ 91 ವಿಕೆಟ್ ತಮ್ಮ ಖಾತೆಗೆ ಜಮೆ ಮಾಡಿದ್ದಾರೆ.

ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸುವ ಸೈನಿ ಅವರಿಗೆ ಬ್ರೆಟ್ ಲೀ ಮತ್ತು ಮಿಚೆಲ್ ಜಾನ್ಸನ್ ಆದರ್ಶಪ್ರಾಯರಾಗಿದ್ದಾರೆ.

 ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಆಡುತ್ತಿದ್ದಾಗ ಸೈನಿ ಅವರು ದಿಲ್ಲಿಯ ಇನ್ನೊಬ್ಬ ಬೌಲರ್ ಸುಮಿತ್ ನರ್ವಾಲ್ ಅವರ ಕಣ್ಣಿಗೆ ಬಿದ್ದರು. ನರ್ವಾಲ್ ಅವರು ಸೈನಿಗೆ ತಮ್ಮ ಕ್ರಿಕೆಟ್ ಅಕಾಡಮಿ(ನರ್ವಾಲ್ ಕ್ರಿಕೆಟ್) ಸೇರುವಂತೆ ಕೇಳಿಕೊಂಡರು. ಆದರೆ ತನ್ನಲ್ಲಿ ಫೀಸ್ ಕಟ್ಟಲು ಹಣ ಇರಲಿಲ್ಲ. ತಂದೆಯ ಕೈಯಿಂದ 400 ರೂ. ಪಡೆದು ಅಕಾಡಮಿ ಸೇರಿದೆ ಎಂದು ಸೈನಿ ಅವರು ತಮ್ಮ ಕ್ರಿಕೆಟ್‌ನ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ನರ್ವಾಲ್ ಮತ್ತು ತಾನು ಜೊತೆಯಾಗಿ ಕರ್ನಾಲ್‌ನ ಕರಣ್ ಸ್ಟೇಡಿಯಂನಲ್ಲಿ ಒಟ್ಟಿಗೆ ತರಬೇತಿ ಪಡೆದಿರುವುದಾಗಿ ಸೈನಿ ಹೇಳುತ್ತಾರೆ.

‘‘ದಿಲ್ಲಿ ತಂಡಕ್ಕೆ ನೆಟ್ ಬೌಲರ್ ನೆರವು ನೀಡಲು ನರ್ವಾಲ್ ಕರೆದರು. ನಾನು ಕುತೂಹಲದಿಂದ ಅಲ್ಲಿಗೆ ಹೋಗಿದ್ದೆ. ಗೌತಮ್ ಗಂಭೀರ್ ಅವರನ್ನು ಮೊದಲ ಬಾರಿ ಅಲ್ಲಿ ನೋಡಿದೆ. ಗಂಭೀರ್‌ಗೆ ನೆಟ್ ಅಭ್ಯಾಸದ ವೇಳೆ ಬೌಲಿಂಗ್ ನಡೆಸಿದೆ. ಗಂಭೀರ್ ನನಗೆ ಕರೆದು ನನ್ನನ್ನು ವಿಚಾರಿಸಿದರು. ನಾನು ಯಾವುದೇ ಅಕಾಡಮಿಗೆ ಹೋಗುತ್ತಿಲ್ಲ. ನರ್ವಾಲ್ ಜೊತೆಗೆ ಇಲ್ಲಿಗೆ ಬಂದಿರುವೆ ಎಂದಾಗ ದಿನನಿತ್ಯ ನೆಟ್ ಅಭ್ಯಾಸಕ್ಕೆ ಬರುವಂತೆ ಗಂಭೀರ್ ಸಲಹೆ ನೀಡಿದರು ’’ಎಂದು ಸೈನಿ ನುಡಿದರು.

ಕಳೆದ ಐಪಿಎಲ್ ಅವೃತ್ತಿಯಲ್ಲಿ 10 ಲಕ್ಷ ರೂ. ಮೊತ್ತಕ್ಕೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಸೈನಿ ಸೇರ್ಪಡೆಗೊಂಡಿದ್ದರು. ರಾಹುಲ್ ದ್ರಾವಿಡ್ ಮತ್ತು ಝಹೀರ್ ಖಾನ್ ಮಾರ್ಗದರ್ಶನದಲ್ಲಿ ಸೈನಿ ಉತ್ತಮ ಬೌಲರ್ ಆಗಿ ರೂಪುಗೊಂಡಿದ್ದಾರೆ. ಸೈನಿ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಎದುರಾಳಿ ತಂಡ ಬಂಗಾಳ ವಿರುದ್ಧ 90ಕ್ಕೆ 7 ವಿಕೆಟ್ ಉಡಾಯಿಸುವ ಮೂಲಕ ದಿಲ್ಲಿ ದಶಕದ ಬಳಿಕ ರಣಜಿ ಟ್ರೋಫಿ ಫೈನಲ್ ತಲುಪಲು ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News