ಮಾಲೆಗಾಂವ್ ಸ್ಫೋಟ : ಆರೋಪ ಮುಕ್ತಗೊಳಿಸಲು ಕೋರಿ ಪುರೋಹಿತ್, ಸಾಧ್ವಿ ಪ್ರಜ್ಞಾ ಸಲ್ಲಿಸಿದ್ದ ಅರ್ಜಿ ವಜಾ

Update: 2017-12-27 12:14 GMT

ಹೊಸದಿಲ್ಲಿ, ಡಿ.27: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿರುವ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಸಾಧ್ವಿ ಪ್ರಜ್ಞಾ ಹಾಗೂ ಇತರರು ತಮ್ಮನ್ನು ಆರೋಪಮುಕ್ತಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯವೊಂದು ತಳ್ಳಿಹಾಕಿದೆ.

   ಆದರೆ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್, ಸಾಧ್ವಿ ಪ್ರಜ್ಞಾ, ಸಮೀರ್ ಕುಲಕರ್ಣಿ, ರಮೇಶ್ ಉಪಾಧ್ಯಾಯ ಮತ್ತು ಸುಧಾಕರ್ ದ್ವಿವೇದಿ ಅವರ ವಿರುದ್ಧ ದಾಖಲಾಗಿದ್ದ ‘ಮೋಕ’ ದೋಷಾರೋಪವನ್ನು ವಜಾಗೊಳಿಸಿರುವ ನ್ಯಾಯಾಲಯ, ಇವರ ವಿರುದ್ಧ ಐಪಿಸಿ ಮತ್ತು ಸೆಕ್ಷನ್ 18( ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ)ಯಡಿ ದೋಷಾರೋಪ ದಾಖಲಿಸುವಂತೆ ಸೂಚಿಸಿದೆ. ರಾಕೇಶ್ ಧಾವ್ಡೆ ಮತ್ತು ಜಗದೀಶ್ ಮ್ಹಾತ್ರೆಯ ವಿರುದ್ಧದ ವಿಚಾರಣೆ ಕೇವಲ ಶಸ್ತ್ರಾಸ್ತ್ರ ಕಾಯ್ದೆಗೆ ಸೀಮಿತವಾಗಿರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ ಪ್ರವೀಣ್ ತಕಲ್ಕಿ, ಶ್ಯಾಮ್‌ಲಾಲ್ ಸಾಹು ಮತ್ತು ಶಿವನಾರಾಯಣ್ ಕಲ್ಸಂಗ್ರ ಅವರ ವಿರುದ್ಧದ ಸ್ಫೋಟ ಪ್ರಕರಣದ ಆರೋಪವನ್ನು ಕೈಬಿಟ್ಟಿದೆ.

ತಮ್ಮ ಮೇಲಿರುವ ಪ್ರಕರಣದ ವಿಚಾರಣೆ ರದ್ದತಿ ಕೋರಿ ಪುರೋಹಿತ್ ಮತ್ತು ಸಮೀರ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವಾರ ನ್ಯಾಯಾಲಯ ವಜಾಗೊಳಿಸಿತ್ತು. ಇವರಿಬ್ಬರಿಗೂ 2017ರ ಆಗಸ್ಟ್ 22ರಂದು ಜಾಮೀನು ದೊರೆತಿದೆ.

ಮಾಲೆಗಾಂವ್‌ನ ಭಿಕ್ಕು ಚೌಕದ ಬಳಿ ಬೈಕೊಂದರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ 6 ಮಂದಿ ಸಾವನ್ನಪ್ಪಿದ್ದು 101 ಮಂದಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಭಯೋತ್ಪಾದನಾ ನಿಗ್ರಹ ದಳವು ಸಾಧ್ವಿ ಪ್ರಜ್ಞಾ ಸಿಂಗ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಹಾಗೂ ಇತರ 9 ಮಂದಿಯನ್ನು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News