×
Ad

ಕುಕ್ ಶತಕ, ಇಂಗ್ಲೆಂಡ್ ತಿರುಗೇಟು

Update: 2017-12-27 23:46 IST

ಮೆಲ್ಬೋರ್ನ್, ಡಿ.27: ನಾಲ್ಕನೇ ಟೆಸ್ಟ್‌ನ ಎರಡನೇ ದಿನವಾದ ಬುಧವಾರ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 192 ರನ್ ಗಳಿಸಿತು. ಮಾಜಿ ನಾಯಕ ಅಲಿಸ್ಟರ್ ಕುಕ್ 32ನೇ ಶತಕ ಸಿಡಿಸುವ ಮೂಲಕ ರನ್ ಬರ ನೀಗಿಸಿಕೊಂಡರು. ಇಂಗ್ಲೆಂಡ್ ತಂಡ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್‌ಗಳಾದ ಮಾರ್ಕ್ ಸ್ಟೋನ್‌ಮನ್(15) ಹಾಗೂ ಜೇಮ್ಸ್ ವಿನ್ಸಿ(17) ಅವರನ್ನು ಅಲ್ಪಮೊತ್ತಕ್ಕೆ ಕಳೆದುಕೊಂಡಿತು.3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 112 ರನ್ ಸೇರಿಸಿದ ಕುಕ್ ಹಾಗೂ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾಗಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ಕುಕ್ ಆ್ಯಶಸ್ ಸರಣಿಯಲ್ಲಿ ಈತನಕ ಕೇವಲ 83 ರನ್ ಗಳಿಸಿದ್ದರು. ನಾಲ್ಕನೇ ಟೆಸ್ಟ್ ನಲ್ಲಿ ತಾನಾಡಿದ 151ನೇ ಪಂದ್ಯದಲ್ಲಿ 166 ಎಸೆತಗಳನ್ನು ಎದುರಿಸಿದ ಕುಕ್ 15 ಬೌಂಡರಿಗಳ ಸಹಿತ ಔಟಾಗದೆ 104 ರನ್ ಗಳಿಸಿದರು. ಈ ಮೂಲಕ ತನ್ನ ಕಳಪೆ ಪ್ರದರ್ಶನವನ್ನು ಟೀಕಿಸುತ್ತಿರುವವರ ಬಾಯಿ ಮುಚ್ಚಿಸಲು ಯತ್ನಿಸಿದರು.

33ರ ಹರೆಯದ ಕುಕ್ 66 ರನ್ ಗಳಿಸಿದ್ದಾಗ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್‌ರಿಂದ ಜೀವದಾನ ಪಡೆದಿದ್ದರು. ಸ್ಮಿತ್ ಎಸೆದ ದಿನದ ಕೊನೆಯ ಓವರ್‌ನಲ್ಲಿ ಸತತ ಬೌಂಡರಿಗಳನ್ನು ಬಾರಿಸಿದ ಕುಕ್ ತನ್ನದೇ ಶೈಲಿಯಲ್ಲಿ ಶತಕ ಪೂರೈಸಿದರು.

   ಕುಕ್ ಶತಕದ ಸಹಾಯದಿಂದ ಇಂಗ್ಲೆಂಡ್ ಎರಡನೇ ದಿನದಾಟದಂತ್ಯಕ್ಕೆ ಗೌರವಾರ್ಹ ಮೊತ್ತ ದಾಖಲಿಸಿದೆ. ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ಗಿಂತ 135 ರನ್ ಹಿನ್ನಡೆಯಲ್ಲಿದೆ. ದಿನದಾಟದಂತ್ಯಕ್ಕೆ ಕುಕ್ ಹಾಗೂ ನಾಯಕ ಜೋ ರೂಟ್(ಔಟಾಗದೆ 49, 105 ಎಸೆತ, 6 ಬೌಂಡರಿ) ಕ್ರೀಸ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯ 327 ರನ್‌ಗೆ ಆಲೌಟ್: ಇದಕ್ಕೆ ಮೊದಲು 3 ವಿಕೆಟ್ ನಷ್ಟಕ್ಕೆ 244 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆತಿಥೇಯ ಆಸ್ಟ್ರೇಲಿಯ ತಂಡ ನಿನ್ನೆಯ ಮೊತ್ತಕ್ಕೆ 67 ರನ್ ಸೇರಿಸುವಷ್ಟರಲ್ಲಿ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್‌ನ ಹಿರಿಯ ಬೌಲರ್‌ಗಳಾದ ಸ್ಟುವರ್ಟ್ ಬ್ರಾಡ್(4-51) ಹಾಗೂ ಜೇಮ್ಸ್ ಆ್ಯಂಡರ್ಸನ್(3-61) ಆಸ್ಟ್ರೇಲಿಯ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಈ ಇಬ್ಬರು ಬೌಲರ್‌ಗಳಿಗೆ ಕ್ರಿಸ್ ವೋಕ್ಸ್(2-72) ಉತ್ತಮ ಸಾಥ್ ನೀಡಿದರು.

ಚೊಚ್ಚಲ ಪಂದ್ಯ ಆಡಿರುವ 22ರ ಹರೆಯದ ವೇಗದ ಬೌಲರ್ ಟಾಮ್ ಕ್ಯೂರ್ರನ್ ತನ್ನ ಮೊದಲ ಸ್ಪೆಲ್‌ನ ಎರಡನೇ ಎಸೆತದಲ್ಲಿ ಆಸೀಸ್ ನಾಯಕ ಸ್ಟೀವ್ ಸ್ಮಿತ್(76 ರನ್, 156 ಎಸೆತ, 8 ಬೌಂಡರಿ) ವಿಕೆಟ್ ಕಬಳಿಸಿ ಆಂಗ್ಲರಿಗೆ ಮೇಲುಗೈ ಒದಗಿಸಿಕೊಟ್ಟರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆದ ಟಾಮ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದ ಸ್ಮಿತ್‌ಗೆ ಆಘಾತ ನೀಡಿದರು. ಸ್ಮಿತ್ 2014ರಲ್ಲಿ ಭಾರತ ವಿರುದ್ಧ ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಔಟಾಗಿದ್ದರು. ಆನಂತರ ಆಡಿರುವ ಎಲ್ಲ ಪಂದ್ಯಗಳಲ್ಲೂ ಔಟಾಗದೇ ಉಳಿದಿದ್ದರು.

ಆಲ್‌ರೌಂಡರ್ ಮಿಚೆಲ್ ಮಾರ್ಷ್(9) ಹಾಗೂ ವಿಕೆಟ್‌ಕೀಪರ್ ಟಿಮ್ ಪೈನ್(24) ಬೇಗನೆ ಔಟಾದರು. ಶಾನ್ ಮಾರ್ಷ್(61 ರನ್, 148 ಎಸೆತ, 8 ಬೌಂಡರಿ) ಪ್ರಸ್ತುತ ಸರಣಿಯಲ್ಲಿ ಮೂರನೇ ಅರ್ಧಶತಕ ಸಿಡಿಸಿದರು. ಮಾರ್ಷ್‌ಗೆ ಬ್ರಾಡ್ ಪೆವಿಲಿಯನ್ ಹಾದಿ ತೋರಿಸಿದರು.

ಬಾಲಂಗೋಚಿಗಳಾದ ಜಾಕ್ಸನ್ ಬರ್ಡ್(4) ಹಾಗೂ ಕಮಿನ್ಸ್(4) ವಿಕೆಟ್ ಕಬಳಿಸಿದ ಬ್ರಾಡ್ ಆಸೀಸ್ ಹೋರಾಟಕ್ಕೆ ಕಡಿವಾಣ ಹಾಕಿದರು. ಲಿಯೊನ್(0) ವಿಕೆಟ್ ಕಬಳಿಸಿದ ಆ್ಯಂಡರ್ಸನ್ ಆಸ್ಟ್ರೇಲಿಯವನ್ನು 327 ರನ್‌ಗೆ ನಿಯಂತ್ರಿಸಿದರು.

ಸಂಕ್ಷಿಪ್ತ ಸ್ಕೋರ್

►ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 327/10

(ವಾರ್ನರ್ 103, ಸ್ಟೀವನ್ ಸ್ಮಿತ್ 76, ಮಾರ್ಷ್ 61, ಸ್ಟುವರ್ಟ್ ಬ್ರಾಡ್ 4-51, ಆ್ಯಂಡರ್ಸನ್ 3-61)

►ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 192/2

(ಅಲಿಸ್ಟರ್ ಕುಕ್ ಔಟಾಗದೆ 104, ಜೋ ರೂಟ್ ಔಟಾಗದೆ 49, ಹೇಝಲ್‌ವುಡ್ 1-39, ಲಿಯೊನ್ 1-44)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News