ದಕ್ಷಿಣ ಆಫ್ರಿಕಕ್ಕೆ ವಿರಾಟ್ ಪಡೆ ಪಯಣ

Update: 2017-12-27 18:21 GMT

ಹೊಸದಿಲ್ಲಿ, ಡಿ.27: ದಕ್ಷಿಣ ಆಫ್ರಿಕ ವಿರುದ್ಧ ಮೂರು ಟೆಸ್ಟ್, ಆರು ಏಕದಿನ ಹಾಗೂ ಮೂರು ಟ್ವೆಂಟಿ-20 ಸರಣಿಯನ್ನು ಆಡಲು ಟೀಮ್ ಇಂಡಿಯಾ ಬುಧವಾರ ದಕ್ಷಿಣ ಆಫ್ರಿಕಕ್ಕೆ ಪ್ರಯಾಣ ಬೆಳೆಸಿತು. ಜ.5 ರಿಂದ ಕೇಪ್‌ಟೌನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ತಂಡ ನಿರ್ಗಮನದ ಮೊದಲು ಭಾರತ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.

    ‘‘ಕಳೆದ ಒಂದೂವರೆ ವರ್ಷದಿಂದ ಭಾರತ ಉತ್ತಮ ತಂಡವಾಗಿ ಬೆಳೆದಿದೆ. ದಕ್ಷಿಣ ಆಫ್ರಿಕ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ಪಿಚ್‌ನಲ್ಲಿ ಆಡುವುದು ನಮಗೊಂದು ದೊಡ್ಡ ಸವಾಲು. ವಿದೇಶಿ ಪಿಚ್ ನಮಗೆ ದೊಡ್ಡ ವಿಷಯವಲ್ಲ. ನಮ್ಮ ತಂಡದ ಸಾಮರ್ಥ್ಯದ ಬಗ್ಗೆ ನನಗೆ ಸಂಶಯವಿಲ್ಲ. ನಾವು ಎಲ್ಲ ಸವಾಲನ್ನು ದಿಟ್ಟವಾಗಿ ಎದುರಿಸಿದರೆ ವಿದೇಶಿ ಪಿಚ್‌ನಲ್ಲೂ ಸ್ವದೇಶಿ ಪಿಚ್‌ನಂತೆ ಆಡಬಹುದು. ನಾವು ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾ ಗಿಲ್ಲ. ನನಗೆ ದೇಶದ ಪರ ಆಡುವುದು ಪ್ರತಿಷ್ಠೆಯ ವಿಷಯ. ತಂಡವಾಗಿ ಹೇಗೆ ಆಡಬೇಕೆಂದು ನಮಗೆ ಗೊತ್ತಿದೆ. ಸವಾಲಿನಿಂದ ಕೂಡಿರುವ ವಾತಾವರಣದಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಜಯಿಸಿದರೆ ಅದರಲ್ಲಿ ಹೆಚ್ಚಿನ ತೃಪ್ತಿ ಸಿಗುತ್ತದೆ’’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

ದಕ್ಷಿಣ ಆಫ್ರಿಕದಲ್ಲಿ ಭಾರತಕ್ಕೆ ಟೆಸ್ಟ್ ಸರಣಿ ಯಾವಾಗಲೂ ಕಬ್ಬಿಣದ ಕಡಲೆಯಾಗಿದೆ. ಭಾರತ ತಂಡ ಕಳೆದ 25 ವರ್ಷಗಳಿಂದ ಆಫ್ರಿಕ ನೆಲದಲ್ಲಿ ಈತನಕ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. 2010-11ರಲ್ಲಿ 1-1 ರಿಂದ ಡ್ರಾ ಸಾಧಿಸಿರುವುದು ಭಾರತದ ಈವರೆಗಿನ ಉತ್ತಮ ಸಾಧನೆಯಾಗಿದೆ.

‘‘ದಕ್ಷಿಣ ಆಫ್ರಿಕ ಪ್ರವಾಸದ ವೇಳೆ ಎದುರಾಗುವ ಸವಾಲನ್ನು ತಂಡ ಸ್ವೀಕರಿಸಬೇಕು. ಆ ನಿಟ್ಟಿನಲ್ಲಿ ನಾವು ಉತ್ತಮ ತಯಾರಿ ನಡೆಸುತ್ತಿದ್ದೇವೆ. ನಾವು 2014ರಲ್ಲಿ ಆಸ್ಟ್ರೇಲಿಯಕ್ಕೆ ಪ್ರವಾಸಗೈದು ಉತ್ತಮ ಪ್ರದರ್ಶನ ನೀಡಿದ್ದೇವೆ. 2015ರಲ್ಲಿ ಇಂಗ್ಲೆಂಡ್‌ನಲ್ಲಿ ನಮ್ಮ ಸಾಧನೆ ಗಮನಾರ್ಹವಾಗಿತ್ತು. ಶ್ರೀಲಂಕಾ ಪ್ರವಾಸವೂ ಐತಿಹಾಸಿಕವಾಗಿತ್ತು. ದಕ್ಷಿಣ ಆಫ್ರಿಕದ ಬೌನ್ಸಿ ಪಿಚ್‌ನಲ್ಲಿ ಆಡಲು ಉತ್ತಮ ತಯಾರಿ ಅಗತ್ಯವಿದೆ’’ಎಂದು ಶಾಸ್ತ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News