ಸಮಾಜ ಒಡೆಯುವ ಹೆಗಡೆ ಹೇಳಿಕೆ ಖಂಡನಾರ್ಹ

Update: 2017-12-27 18:24 GMT

ಮಾನ್ಯರೇ,

ಕೇಂದ್ರ ಸರಕಾರದ ಉನ್ನತ ಮಂತ್ರಿ ಸ್ಥಾನದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ ಕುಮಾರ ಹೆಗಡೆಯವರು ಇತ್ತೀಚೆಗೆ ವಿವಾದ ಸೃಷ್ಟಿಸುವಂತಹ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಇತರ ಧರ್ಮಗಳ ಬಗ್ಗೆ ಹಗುರವಾಗಿ ಮಾತನಾಡುವುದಲ್ಲದೆ, ‘‘ಜಾತ್ಯತೀತರು ಅಪ್ಪಅಮ್ಮನ ರಕ್ತದ ಪರಿಚಯ ಇಲ್ಲದವರು’’, ‘‘ಸಂವಿಧಾನವನ್ನು ಬದಲಿಸಬೇಕು’’, ‘‘ಸಂವಿಧಾನವನ್ನು ಬದಲಿಸಲಿಕ್ಕಾಗಿಯೇ ನಾವು ಬಂದಿರುವುದು’’ ಎಂಬ ಇವರ ಪ್ರಚೋದನಾಕಾರಿಯ ಕಿಡಿನುಡಿಗಳು ಸಮಾಜದಲ್ಲಿನ ಸಾಮರಸ್ಯ, ಶಾಂತಿ ಮತ್ತು ಸುವ್ಯವಸ್ಥೆಗೆ ಕಂಟಕವಾಗುತ್ತಿವೆ. ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಹುಟ್ಟುತ್ತಿದೆ.

‘‘ಜಾತ್ಯತೀತ ಎಂದು ಕರೆಸಿಕೊಳ್ಳುವವರನ್ನು ಸಂಶಯದಿಂದ ನೋಡಬೇಕಾಗುತ್ತದೆ’’ ಎನ್ನುವ ಮಾನ್ಯ ಅನಂತ ಕುಮಾರರವರೇ, ಭಾರತದಲ್ಲಿ ಅಣ್ಣ ಬಸವಣ್ಣ, ಸಂತ ಕನಕದಾಸ, ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ, ಡಾ. ಬಿ. ಆರ್. ಅಂಬೇಡ್ಕರ್, ಡಾ ಎ.ಪಿ.ಜೆ. ಅಬ್ದುಲ್ ಕಲಾಂ ಒಳಗೊಂಡಂತೆ ಅನೇಕ ಮಹಾತ್ಮರು, ಶರಣರು, ಸಂತರು, ರಾಷ್ಟ್ರೀಯ ನಾಯಕರು ಜಾತ್ಯತೀತರು ಎಂದು ಕರೆಸಿಕೊಂಡಿದ್ದಾರೆ. ಅಂದರೆ ಸಚಿವರ ದೃಷ್ಟಿಯಲ್ಲಿ ಅವರನ್ನು ಕೂಡಾ ಸಂಶಯದಿಂದಲೇ ನೋಡಬೇಕೇ?

ಉನ್ನತ ಸ್ಥಾನದಲ್ಲಿರುವ ಒಬ್ಬ ಸಚಿವರಾಗಿರುವ ಅನಂತ ಕುಮಾರ ಹೆಗಡೆಯವರು ಅನಕ್ಷರಸ್ಥರು ಕೂಡಾ ಮಾತನಾಡದಂತಹ ಅವಿವೇಕಿತನದ ಮಾತುಗಳನ್ನಾಡುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ.

ಸಾವಿನಲ್ಲೂ ರಾಜಕಾರಣ ಮಾಡಿ ಇಡೀ ರಾಜ್ಯವೇ ಹೊತ್ತಿ ಉರಿಯುವಂತೆ ಮಾಡುತ್ತಿರುವ ಸಚಿವರು ದಲಿತ ಸಮುದಾಯದ ಅಪ್ರಾಪ್ತ ವಯಸ್ಸಿನ ಸಹೋದರಿ ದಾನಮ್ಮಳನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದವರ ಕುರಿತು ತುಟಿ ಬಿಚ್ಚಲಿಲ್ಲ ಯಾಕೆ? ದಲಿತರ ಜೀವಕ್ಕೆ ಬೆಲೆಯಿಲ್ಲವೇ?.

ತಮ್ಮ ಸ್ವಾರ್ಥ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಹಿಂದುತ್ವದ ಹೆಸರಿನಲ್ಲಿ ಸಮಾಜಕ್ಕೆ ಕಿಚ್ಚಿಡಲು ಪ್ರಯತ್ನಿಸುತ್ತಿರುವ ಸಚಿವರು, ತಾವು ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಸಮಾಜಕ್ಕೆ ಕೊಟ್ಟ ಕೊಡುಗೆಯೇನು? ತಮ್ಮ ಸಚಿವ ಸ್ಥಾನದಿಂದ ರಾಜ್ಯದ ಎಷ್ಟು ಯುವಕರಿಗೆ ಉಪಯೋಗವಾಗಿದೆ?

ಆದ್ದರಿಂದ ಸಚಿವರೇ, ನಿಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಢೋಂಗಿ ದೇಶ ಭಕ್ತಿ, ಢೋಂಗಿ ಹಿಂದುತ್ವದ ಹೆಸರಿನಲ್ಲಿ ಸಮಾಜದ ಮುಗ್ಧ ಜನರನ್ನು ಬಲಿಪಶು ಮಾಡಬೇಡಿ.ಸಮಾಜವನ್ನು ಒಡೆಯದಿರಿ.

ನಬಿಪಟೇಲ್ ಕೆ. ಆಲಗೂರ, ಸಿಂದಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News